ಶ್ರೀ ದೇವಿ ಸಾವಿನ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಮಾಜಿ ಪೊಲೀಸ್ ಅಧಿಕಾರಿ..!

ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ, ಸಂಬಂಧಿಯ ವಿವಾಹಕ್ಕೆಂದು ದುಬೈಗೆ ತೆರಳಿದ್ದ ವೇಳೆ ಫೆಬ್ರವರಿ 24 ರಂದು ತಾವು ತಂಗಿದ್ದ ಪಂಚತಾರಾ ಹೋಟೆಲ್ ನ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಶ್ರೀದೇವಿ ಸಾವಿನ ಕುರಿತು ಹಲವಾರು ಅನುಮಾನಗಳು ಆ ಸಂದರ್ಭದಲ್ಲಿ ಉದ್ಬವವಾಗಿದ್ದವಾದರೂ ತನಿಖೆ ನಡೆಸಿದ್ದ ದುಬೈ ಪೊಲೀಸರು, ಶ್ರೀದೇವಿಯವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ ವೇಳೆ ಅವರ ದೇಹದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿತ್ತಲ್ಲದೇ ಶ್ರೀದೇವಿ ತಂಗಿದ್ದ ಹೋಟೆಲ್ ರೂಮಿನಲ್ಲಿ ದೊರೆತ ಸಾಕ್ಷ್ಯಗಳನ್ನು ಆಧರಿಸಿ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿದ ಕಾರಣ ಈ ಸಂಭವಿಸಿದೆ ಎಂದು ವರದಿ ನೀಡಿದ್ದರು.

ಬಳಿಕ ಶ್ರೀದೇವಿಯವರ ಮೃತದೇಹವನ್ನು ಮುಂಬೈಗೆ ತಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇದಾದ ಬಳಿಕವೂ ಶ್ರೀದೇವಿಯವರ ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗುತ್ತಲೇ ಇದ್ದವಲ್ಲದೇ ಬಾಲಿವುಡ್ ಚಿತ್ರ ನಿರ್ಮಾಪಕರೊಬ್ಬರು ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅರ್ಜಿ ವಜಾಗೊಂಡಿದ್ದ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯೂ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದು ಅರ್ಜಿಯನ್ನು ವಜಾಗೊಳಿಸಲಾಗಿತ್ತು.

ಇದೀಗ ಮತ್ತೆ ಶ್ರೀದೇವಿ ಸಾವಿನ ಸುದ್ದಿ ಸದ್ದು ಮಾಡುತ್ತಿದೆ. ದೆಹಲಿಯ ನಿವೃತ್ತ ಸಹಾಯಕ ಪೊಲೀಸ್ ಕಮೀಷನರ್ ವೇದ್ ಭೂಷಣ್, ಶ್ರೀದೇವಿಯವರದ್ದು ಸಹಜ ಸಾವಲ್ಲ. ಅದೊಂದು ಪೂರ್ವ ನಿಯೋಜಿತ ಹತ್ಯೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ನಿವೃತ್ತರಾದ ಬಳಿಕ ಸ್ವತಂತ್ರ ತನಿಖಾ ಸಂಸ್ಥೆಯೊಂದನ್ನು ನಡೆಸುತ್ತಿರುವ ವೇದ್ ಭೂಷಣ್, ಶ್ರೀದೇವಿ ಸಾವು ಸಂಭವಿಸಿದ್ದ ಜುಮೇರಾ ಎಮಿರೇಟ್ಸ್ ಟವರ್ಸ್ ಹೋಟೆಲ್ ಗೆ ಭೇಟಿ ನೀಡಿದ್ದರಲ್ಲದೇ ರೂಮ್ ಪ್ರವೇಶಿಸಲು ಅವಕಾಶ ಸಿಗದ ಕಾರಣ ಶ್ರೀದೇವಿ ತಂಗಿದ್ದ ಪಕ್ಕದ ರೂಮ್ ನಲ್ಲಿ ತಂಗಿ ಕೂಲಂಕುಷವಾಗಿ ಪರಿಶೀಲಿಸಿದ್ದಾರಂತೆ.

ತಮ್ಮ ಪರಿಶೀಲನೆ ಪ್ರಕಾರ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಬದಲಾಗಿ ಉಸಿರು ಕಟ್ಟುವವರೆಗೂ ಶ್ರೀದೇವಿಯವರನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ. ಬಳಿಕ ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍