ಪ್ಲಾಸ್ಟಿಕ್ ಹಾವಿನ ಬದಲು, ನೈಜ ಹಾವಿನ ಜೊತೆ ನಟಿಸಲು ಹೋಗಿ ಬೆಂಗಾಲಿ ನಟಿ ಸಾವು..!

ಕೋಲ್ಕತ್ತಾ: ನಟಿಯೊಬ್ಬರು ಲೈವ್ ಆಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಹಸ್ನಾಬಾದ್ ನಲ್ಲಿ ನಡೆದಿದೆ.

ಕಾಲಿದಾಸಿ ದೇವಿ (50) ಮೃತ ದುರ್ದೈವಿ. ಬುಧವಾರ ಈ ಘಟನೆ ನಡೆದಿದ್ದು, ಹಾವಿನ ದೇವತೆಯಾದ `ಮಾ ಮನಸಾ’ ಪಾತ್ರದಲ್ಲಿ ನಟಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ದೇವಿ ಅವರು ಪ್ರತಿ ವರ್ಷವೂ ಪ್ಲಾಸ್ಟಿಕ್ ಹಾವಿನೊಡನೆ ಅಭಿನಯಿಸುತ್ತಿದ್ದರು. ಆದರೆ ಈ ಬಾರಿ ಅವರು ಎರಡು ಜೀವಂತ ಹಾವುಗಳೊಂದಿಗೆ ಪಾತ್ರವನ್ನು ನಿರ್ವಹಿಸಲು ನಿರ್ಧರಿಸಿದ್ದರು.

ಅದೇ ರೀತಿ ಹಾವಿನೊಂದಿಗೆ ಅಭಿನಯಿಸುವ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ದೇವಿ ಅವರು ಕುಸಿದು ಬಿದ್ದಿದ್ದಾರೆ. ನಂತರ ಸ್ಥಳಿಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರನ್ನು ಸಹನಟರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾವು ಕಚ್ಚಿದ ತಕ್ಷಣ ಸಕಾಲಕ್ಕೆ ವೈದ್ಯಕೀಯ ನೆರವು ಒದಗಿಸಿದ್ದರೆ, ಆಕೆಯ ಜೀವವನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಥಿಯೇಟರ್ ನ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪೊಲೀಸರು ಜೀವಂತ ಹಾವಿನೊಂದಿಗೆ ಅಭಿನಯಿಸಲು ನೀವು ಹೇಗೆ ಅನುಮತಿ ನೀಡಿದ್ದೀರಿ ಎಂದು ಅವರನ್ನು ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ಹಾವುಗಳನ್ನು ಜೀವಂತವಾಗಿ ಪ್ರದರ್ಶನಕ್ಕೆ ಬಳಸುವ ಮೊದಲು ಅವುಗಳ ವಿಷಪೂರಿತ ಹಲ್ಲುಗಳನ್ನು ತೆಗೆದು ಹಾಕಲಾಗುತ್ತದೆ. ಜೊತೆಗೆ ಅದನ್ನು ದೃಢ ಪಡಿಸಿಕೊಂಡ ನಂತರ ಹಾವುಗಳನ್ನು ಬಳಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳೀಯ ವೈದ್ಯರು ಆಕೆಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಆದ್ದರಿಂದ ಆಕೆ ಮೃತಪಟ್ಟಿದ್ದಾಳೆ ಅವರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍