ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬ್ರೇಕ್ ಕೊಟ್ಟಿದ್ದ ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ, ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ..! ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್..!!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬ್ರೇಕ್ ಕೊಟ್ಟಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಇಂದು ವಿಧಿವಶರಾಗಿದ್ದಾರೆ. ಪಿ ಎನ್​ ಸತ್ಯ ಅವರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

2002 ರಲ್ಲಿ ಮೆಜೆಸ್ಟಿಕ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಸತ್ಯ ಅವರು ಡಾನ್, ದಾಸ, ಶಾಸ್ತ್ರಿ, ತಂಗಿಗಾಗಿ, ಸುಗ್ರೀವಾ, ಶಿವಾಜಿನಗರ ಮುಂತಾದ ಚಿತ್ರಗಳಿಗೆ ನಿರ್ದೇಶನ ಮಾಡಿ, ಖ್ಯಾತಿ ಗಳಿಸಿದ್ದರು. ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಅವರಿಗೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಶುಕ್ರವಾರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಇಂದು ಸಂಜೆ ಲೋ ಬಿಪಿ ಆದ ಕಾರಣ ಕೊನೆ ಉಸಿರೆಳೆದಿದ್ದಾರೆ. ಬಸವೇಶ್ವರನಗರದ ಸತ್ಯವರ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

ಮೆಜೆಸ್ಟಿಕ್, ಡಾನ್, ದಾಸ, ಸರ್ದಾರ, ಉಡೀಸ್, ಶಾಸ್ತ್ರೀ, ತಂಗಿಗಾಗಿ, ಗೂಳಿ, ಕೆಂಚ, ಹ್ಯಾಟ್ರಿಕ್ ಹೊಡಿ ಮಗ, ಸುಗ್ರೀವ, ಪಾಗಲ್, ಜೇಡರಹಳ್ಳಿ, ಶಿವಾಜಿನಗರ ಬೆಂಗಳುರು ಅಂಡರ್‍ವಲ್ಡ್ ಮತ್ತು ಮರಿ ಟೈಗರ್ ಸೇರಿದಂತೆ 16 ಚಿತ್ರಗಳನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದರು. ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಮರಿ ಟೈಗರ್ ಸತ್ಯ ನಿರ್ದೇಶನದ ಕೊನೆಯ ಚಿತ್ರ.

ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಿರ್ದೇಶಕ, ನಟ ಪಿ.ಎನ್ ಸತ್ಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ದರ್ಶನ್ ಕಂಬನಿ ಮಿಡಿದಿದ್ದು, “ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ `ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍