ಪುನೀತ್ ರಾಜಕುಮಾರ್ ಕಾರು ಅಪಘಾತ – ಅದೃಷ್ಟವಶಾತ್ ಪುನೀತ್ ಪ್ರಾಣಾಪಾಯದಿಂದ ಪಾರು..!

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಆಂಧ್ರಪ್ರದೇಶದ ಅನಂತಪುರದ ಬಳಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪುನೀತ್ ರಾಜಕುಮಾರ್ ಅಪಾಯದಿಂದ ಪಾರಾಗಿದ್ದಾರೆ.

ಬಳ್ಳಾರಿಯಲ್ಲಿ ನಟಸಾರ್ವಭೌಮ ಚಿತ್ರದ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಗುರುವಾರ ರಾತ್ರಿ 9.30ರ ಸುಮಾರಿಗೆ ಆಂಧ್ರ ಪ್ರದೇಶದ ಅನಂತಪುರ ಸಮೀಪದಲ್ಲಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಮೂರು ರಸ್ತೆಗಳ ತಿರುವು ಗೊತ್ತಾಗದೇ ಇರುವ ಕಾರಣ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನ ಹೆಡ್ ಲೈಟ್ ಬಳಿ ಬಂಪರ್ ಗೆ  ಹಾನಿಯಾಗಿದೆ.

ಪುನೀತ್ ರಾಜ್‍ ಕುಮಾರ್ ಹಾಗೂ ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುನೀತ್ ರಾಜ್‍ ಕುಮಾರ್ ಜೊತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದರು. ಇದೇ ಸಂದರ್ಭದಲ್ಲಿ ಪುನೀತ್ ಅವರನ್ನು ಗುರುತಿಸಿದ ಬೆಂಗಳೂರು ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಡ್ರಾಪ್ ಮಾಡಿದ್ದಾರೆ.

ಈ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ತೀವ್ರ ಆತಂಕಕ್ಕೀಡಾಗಿದ್ರು. ತಡರಾತ್ರಿ ಬೆಂಗಳೂರಿನ ತಮ್ಮ ಸದಾಶಿವನಗರದ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ನನಗೆ ಏನೂ ಆಗಿಲ್ಲ. ಚೆನ್ನಾಗಿಯೇ ಇದ್ದೇನೆ. ಕಾರಿನ ಟಯರ್ ಸ್ಫೋಟಗೊಂಡಿದೆ ಅಷ್ಟೇ. ಯಾರಿಗೂ ಏನೂ ಆಗಿಲ್ಲ. ನನ್ನ ಬಗ್ಗೆ ಕಾಳಜಿ ತೋರಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..