ಕರ್ನಾಟಕ ಬಿಟ್ಟು ವಿಶ್ವದಾದ್ಯಂತ ಕಾಳಾ ತೆರೆಗೆ – ಬೆಂಗಳೂರಲ್ಲಿ ಮಧ್ಯರಾತ್ರಿ ಪ್ರದರ್ಶನಕ್ಕೆ ಕನ್ನಡಿಗರ ತಡೆ..! ನಾನು ಯಾವುದೇ ತಪ್ಪು ಮಾಡಿಲ್ಲ: ಕನ್ನಡದಲ್ಲಿ ರಜಿನಿ ಮನವಿ..!!

ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಳಾ ಕರಿಕಾಳನ್ ಸಿನಿಮಾ ರಿಲೀಸ್ ಗೆ ಬಿಡುಗಡೆಗೆ ರಾಜ್ಯದಲ್ಲಿ ಬ್ರೇಕ್ ಬಿದ್ದಿದೆ. ಆದ್ರೆ ವಿಶ್ವದಾದ್ಯಂತ ಕಾಳಾ ಸಿನಿಮಾ ರಿಲೀಸ್ ಆಗಿದ್ದು, ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.

ಬೆಂಗಳೂರಿನ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್‍ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.

ರಾತ್ರಿ ನಗರದ ಲಾಲ್‍ಭಾಗ್ ರಸ್ತೆಯ ಊರ್ವಶಿ ಚಿತ್ರಮಂದಿರದ ಎದುರು ಕನ್ನಡಪರ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದ್ರು.. ಚಿತ್ರ ಪ್ರದರ್ಶನ ರದ್ದುಗೊಳಿಸಬೇಕು. ಕಾವೇರಿ ನಮ್ಮದು. ನಮಗೆ ತಮಿಳು ಚಿತ್ರಗಳ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಮಧ್ಯೆ ಕಾಳಾ ಬೆಳಗಿನ ಪ್ರದರ್ಶನದ ಟಿಕೆಟ್ ನೀಡಲಾಗ್ತಿದೆ ಎಂಬ ಮಾಹಿತಿ ಹರಿದಾಡ್ತಿದ್ದ ಹಿನ್ನೆಲೆ ಚಿತ್ರದ ಕೆಲ ಅಭಿಮಾನಿಗಳು ಊರ್ವಶಿ ಚಿತ್ರಮಂದಿರದ ಎದುರು ಜಮಾಯಿಸಿದ್ರು.

ಇದೇ ವೇಳೆ ಪ್ರತಿಭಟನಾಕಾರರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕ-ಮಕಿ ಸಹ ನಡೆಯಿತು. ಯಾವುದೇ ಕಾರಣಕ್ಕೂ ಕಾಳಾ ಚಿತ್ರವನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಚಿತ್ರ ಮಂದಿರದ ಮಾಲೀಕರು ಕಾಳಾ ಚಿತ್ರ ಪ್ರದರ್ಶಿಸುವ ಧೈರ್ಯ ತೆಗೆದುಕೊಂಡರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ರು ಎಲ್ಲರನ್ನೂ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿ ಚಿತ್ರಮಂದಿರದ ಗೇಟ್ ಮುಚ್ಚಿಸಿದ್ರು.

ನಾನು ಯಾವುದೇ ತಪ್ಪು ಮಾಡಿಲ್ಲ: ಕನ್ನಡದಲ್ಲಿ ರಜಿನಿ ಮನವಿ..!!

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ತಮಿಳಿನ ಕಾಳಾ ಸಿನಿಮಾಗೆ ಕರ್ನಾಟಕದಲ್ಲಿ ಭಾರೀ ವಿರೋಧವ್ಯಕ್ತವಾಗಿದೆ. ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆದ್ರೂ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗಿಲ್ಲ. ಈ ಸಂಬಂಧ ರಜಿನಿಕಾಂತ್ ಕನ್ನಡಿಗರಲ್ಲಿ ಸಿನಿಮಾ ನೋಡುವವರಿಗೆ ತೊಂದರೆ ಮಾಡಬೇಡಿ ಅಂತಾ ಕನ್ನಡದಲ್ಲಿಯೇ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ `ಕಾಳಾ’ ಚಲನಚಿತ್ರವು ಸುಗಮವಾಗಿ ಬಿಡುಗಡೆಯಾಗಲು ಕನ್ನಡಿಗರು ಸಹಕರಿಸಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಸಿನಿಮಾ ನೋಡಬಯಸುವವರಿಗೆ ಯಾವುದೇ ತೊಂದರೆ ಮಾಡಬೇಡಿ. ಎಲ್ಲರೂ ಸಹಕಾರ ನೀಡಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆಯು ಸುಪ್ರೀಂ ಕೋರ್ಟ್ ನಿರ್ಧಾರ ಆಗಿದೆ. ಈ ಕುರಿತು ನಾನು ಪ್ರಸ್ತಾಪಿಸಿದ್ದರಲ್ಲಿ ತಪ್ಪೇನಿಲ್ಲ ಅಂತಾ ಹೇಳಿದ್ದಾರೆ.

ಕರ್ನಾಟಕ ಹೊರತು ಪಡಿಸಿ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚನ್ನೈನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ತಮ್ಮ ನೆಚ್ಚಿನ ನಟನ ಫೋಟೋ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡುವ ಸಂಭ್ರಮಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: