ವಿವಾಹವಾಗುವುದನ್ನೇ ಕಾಯಕ ಮಾಡಿಕೊಂಡಿದ್ದಳು ಈ ಸುಂದರಿ…! ಚಿತ್ರದುರ್ಗದ ಈ ಸ್ಟೋರಿ ಓದಿ..

ಚಿತ್ರದುರ್ಗ ಪೊಲೀಸರ ಬಲೆಗೆ ಬಿದ್ದಿರುವ ಮಹಾರಾಷ್ಟ್ರ ಯುವತಿಯೊಬ್ಬಳ ಕಥೆ ಬೆಚ್ಚಿಬೀಳಿಸುವಂತಿದೆ. ವಿವಾಹವಾಗಿ ವಂಚನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಈಕೆ, ಈವರೆಗೆ ಬರೋಬ್ಬರಿ ಆರು ಮಂದಿಯನ್ನು ವಿವಾಹವಾಗಿದ್ದಳೆಂಬ ಅಂಶ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ನಾಸಿಕ್ ನಿವಾಸಿ 30 ವರ್ಷದ ಸ್ನೇಹಾ ಬಂಧಿತ ಯುವತಿಯಾಗಿದ್ದು, ಮೇ 11ರಂದು ಚಿತ್ರದುರ್ಗದ ವ್ಯಕ್ತಿಯೊಬ್ಬರೊಂದಿಗೆ ಜಗಳೂರು ಮಹಾಲಿಂಗಪ್ಪ ಕಲ್ಯಾಣ ಮಂಟಪದಲ್ಲಿ ಅದ್ದೂರಿ ವಿವಾಹವಾಗಿದ್ದ ಈಕೆ, ಇದಾದ ಮೂರು ದಿನಗಳಲ್ಲೇ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಳು.

ವಿವಾಹಕ್ಕೆ ವಧು ಹುಡುಕುತ್ತಿದ್ದ ಯುವಕನಿಗೆ ಮಹಾರಾಷ್ಟ್ರದ ಗಾಂಧಿಮಾ ಹಾಗೂ ಆಕಾಶ್ ಎಂಬವರು ಸ್ನೇಹಾಳನ್ನು ತೋರಿಸಿದ್ದು, ಆಕೆ ಕುಟುಂಬ ತುಂಬಾ ಬಡತನದಲ್ಲಿರುವ ಕಾರಣ 9 ಲಕ್ಷ ರೂ. ವಧುದಕ್ಷಿಣೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.

ಅದರಂತೆ ವಧುದಕ್ಷಿಣೆ ಹಾಗೂ 90 ಗ್ರಾಂ ಚಿನ್ನಾಭರಣ ನೀಡಿ ಈತ ವಿವಾಹವಾಗಿದ್ದು, ಮೂರು ದಿನಗಳ ಬಳಿಕ ಪತಿಯೊಂದಿಗೆ ಜಗಳವಾಡಿದ ಸ್ನೇಹಾ, ನಂತರ ರಾತ್ರೋರಾತ್ರಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಳು.

ಪತ್ನಿಗಾಗಿ ಹುಡುಕಾಡಿ ಬೇಸತ್ತ ಯುವಕ ಕೋಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಾಹಕ್ಕೆ ಮಧ್ಯಸ್ತಿಕೆ ವಹಿಸಿದ್ದ ಗಾಂಧಿಮಾ, ಆಕಾಶ್ ಹಾಗೂ ಸ್ನೇಹಾಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಇವರುಗಳ ಅಸಲಿಯತ್ತು ಬಯಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..