ಡೇಟಿಂಗ್ ಆ್ಯಪ್​ನಲ್ಲಿ ಪ್ರೀತಿ ಹುಡಕಲು ಹೋದವನಿಗೆ ಆಗಿದ್ದೇನು..? ಈ ಸುದ್ದಿ ಓದಿ.

ಬೆಂಗಳೂರು: ಲವ್, ಈಶ್ಕ್, ಪ್ರೀತಿ ಅನ್ನೋದೇ ಹಾಗೆ. ಅದು ಹೃದಯಗಳನ್ನು ಬೆಸೆಯೋ ಫೆವಿ ಕ್ವಿಕ್. ಬಾಡಿ ಬರಡಾದ ಮನಸ್ಸಿಗೆ ಕೂಲ್ ಕೂಲ್ ಚಿಲ್ಡ್ ಬಿಯರ್. ಬಿರು ಬಿಸಿಲಲ್ಲಿ ನಡೆಯುತ್ತಿರೋರಿಗೆ ಹೈಟೆಕ್ ಎಸಿ ಇರೋ ಕ್ಯಾರವಾನ್. ಹೀಗಾಗಿಯೇ ಒಂಟಿ ಒಂಟಿಯಾಗಿರೋರಿಗೆ ಜಂಟಿಯಾಗೋ ಹಂಬಲ. ಎಷ್ಟೋ ಜನರಿಗೆ ಅದು ಹುಡುಕುತ್ತಿರುವ ಬಳ್ಳಿ ಕಾಲಿಗೆ ಸಿಕ್ಕಿಹಾಕಿಕೊಂಡಂಗೆ ಆದ್ರೆ. ಇನ್ನು ಕೆವರಿಗೆ ಮರುಭೂಮಿಯಲ್ಲಿ ಕಾಣಸಿಗೋ ಮರೀಚೀಕೆ.

ಎಷ್ಟೋ ಜನ ಆ ಮಾಯದ ಜಿಂಕೆಯನ್ನ ಹುಡುಕುತ್ತಲೇ ಇರುತ್ತಾರೆ. ಹೀಗಾಗಿಯೇ ಎಷ್ಟೋ ಜನ ನಮ್ಮ ಸಿದ್ರಾಮಣ್ಣ ಶಾದಿ ಭಾಗ್ಯ ಕೊಟ್ಟಂಗೆ, ಲವ್ ಭಾಗ್ಯನಾದ್ರೂ ಕೊಡಬಾರದಿತ್ತಾ ಅಂತಾ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಾ ಇರುತ್ತಾರೆ. ಇಂಥವರಿಗಾಗಿಯೇ ಮಳೆಗಾಲದಲ್ಲಿ ತಿಪ್ಪೆಯಲ್ಲಿ ಹುಟ್ಟುವ ನಾಯಿ ಕೊಡೆಗಳಂತೆ, ಸಾವಿರಾರು ಲವ್ ಆ್ಯಪ್ಸ್, ಡೇಟಿಂಗ್ ಆ್ಯಪ್ಸ್ ಹುಟ್ಟಿಕೊಂಡಿವೆ.

ಇದ್ರಲ್ಲಿ ಕೆಲವು ಜೆನ್ಯೂನ್ ಆಗಿದ್ರೆ, ಹಲವು ಮಸ್ತ್ ಮಸ್ತ್ ಸಿಲ್ಕ್ ಟೋಪಿ ಹಾಕೋ ಪಕ್ಕಾ 420 ಸೈಟ್​ಗಳು. ಇನ್ನು ಇದ್ರಲ್ಲಿ ಟ್ರು ಲವ್ ಸಿಗೋದು ಕೋಡ ರಾಗಿಯ ರಾಶಿಯಲ್ಲಿ, ಸಾಸಿವೆಯ ಕಾಳು ಹುಡುಕಿದಂತೆ. ಸಿಕ್ಕರೆ ಅದೃಷ್ಟ..! ಸಿಗದಿದ್ದರೆ ಬೆಂಗಳೂರಿನ ಉದ್ಯಮಿ ಸುರೇಶ್ ಎಂಬಾತನಿಗೆ ಆದ ಗತಿ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಸುರೇಶ್​ಗೆ ಆಗಿದ್ದೇನು ಗೊತ್ತಾ?

ದುಡ್ಡೂ ಹೋಯ್ತು, ನೆಮ್ಮದಿಯೂ ಮಿಸ್ ಆಯ್ತು..!
ಲವ್ ಹಿಂದೆ ಬಿದ್ದಿದ್ದ ಬೆಂಗಳೂರಿನ ಉದ್ಯಮಿ ಸುರೇಶ್ ನಂಗೂ ಒಬ್ಬಳು ಗೆಳತಿ ಬೇಕು ಅಂತಾ ಹಾಡುತ್ತ ಡೇಟಿಂಗ್ ಆ್ಯಪ್ ಒಂದಕ್ಕೆ ಎಂಟ್ರಿಯಾಗಿದ್ರು. ಅದ್ರಲ್ಲಿ ಯಾರೋ ಸುರಸುಂದರಾಗಿ ಹುಡುಕಿ ಬಂದು ತನ್ನ ಮನದನ್ನೆ ಆಗ್ತಾಳೆ ಅಂತಾ ಕಾಯ್ತಿದ್ದ ಸುರೇಶ್​ಗೆ, ಪಕ್ಕಾ ಫೋರ್ ಟ್ವೆಂಟಿಯೊಬ್ಬಳು ಗಂಟು ಬಿದ್ದಿದ್ದಳು. ಅವಳ ಅಂದ, ಬಣ್ಣದ ಮಾತಿಗೆ ಮಾರು ಹೋಗಿದ್ದ ಸುರೇಶ್, ಕನಸಲ್ಲೇ ಹನಿಮೂನ್ ಕೂಡ ಮುಗಿಸಿ ಬಂದಿದ್ರು. ಹೀಗಾಗಿಯೇ, ಆಕೆ ಒಂದು ದಿನ ಅಳುತ್ತ ನನ್ನ ತಂದೆಗೆ ಹುಷಾರ್ ಇಲ್ಲ, ನಂಗೆ ಅರ್ಜೆಂಟಾಗಿ 39 ಸಾವಿರ ರೂಪಾಯಿ ಹಣ ಬೇಕು ಅಂತಾ ಕೇಳಿದ್ಲು. ಅಷ್ಟೇ ತಾನೆ, ನಾನಿರುವುದೇ ನಿನಗಾಗಿ ಎಂದು ಹಾಡುತ್ತ ಈ ಸುರೇಶ್ ಅಷ್ಟು ಹಣವನ್ನ ಆಕೆ ನೀಡಿದ್ದ ಖಾತೆಗೆ ಹಾಕಿದ್ರು. ಆದ್ರೆ, ಈತನ ವೀಕ್ನೆಸ್ ಅರಿತಿದ್ದ ಆ ಚಾಲಾಕಿ, ನಂತರ ಮತ್ತಷ್ಟು, ಮಗದಷ್ಟು ಹಣ ಕೇಳುತ್ತಲೇ ಹೊಗಿದ್ದಳಂತೆ. ಈತ ಹಾಕುತ್ತಲೇ ಹೋಗಿದ್ದ. ಹೀಗೆ ಬರೋಬ್ಬರಿ 59 ಲಕ್ಷ ರೂಪಾಯಿಗಳನ್ನು ಆಕೆಯ ಖಾತೆಗೆ ವರ್ಗಾವಣೆ ಮಾಡಿದ ಮೇಲೆ ಈ ಪುಣ್ಯಾತ್ಮನಿಗೆ ಬುದ್ಧಿ ಬಂದಿದೆ. ಈಗ ಪೊಲೀಸ್ ಠಾಣೆ ಮೆಟ್ಟಿಲೇರಿರೋ ಸುರೇಶ್, ಕಾಪಾಡಿ- ಹಣ ವಾಪಸ್ ಕೊಡಿಸಿ ಅಂತಾ ಕಂಪ್ಲೆಂಟ್ ನೀಡಿದ್ದಾನೆ.

ಒಟ್ಟಿನಲ್ಲಿ ಡೇಟಿಂಗ್ ಸೈಟ್​ನ ಮೋಡಿಗೆ ಬಿದ್ದ ಆಸಾಮಿ ಬೆಪ್ಪತಕ್ಕಡಿಹಾಗೆ ದುಡ್ಡು ಕಳೆದುಕೊಂಡು ಈಗ ಕಣ್ ಕಣ್ಣು ಬಿಡ್ತಾ ಇದ್ದಾನೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ? ಆದ್ರೆ, ನೀವು ಮಾತ್ರ ಹೀಗೆಲ್ಲ ಮಾಡೋ ಮುನ್ನ ಸ್ವಲ್ಪ ಎಚ್ಚರ ವಹಿಸಿದ್ರೆ ನಿಮಗೇ ಒಳ್ಳೆದು.
👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍