ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕರ ರಕ್ಷಣೆಗೆ ತೆರಳಿ ಇಬ್ಬರು ಕೂಲಿಗಳ ಸಾವು..!

ಮುಂಬೈ: ಇಲ್ಲಿನ ವಸಾಯಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ತೆರಳಿ ಇಬ್ಬರು ಕೂಲಿಗಳು ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿ 8.30ರ ಸುಮಾರಿಗೆ 66 ವರ್ಷದ ಎಸ್ ಪಂಗಟಿ ರಾಜ್ ನಾಯ್ಡು ಎಂಬ ಪ್ರಯಾಣಿಕರೊಬ್ಬರು ತುಂಬಿ ತುಳುಕುತ್ತಿದ್ದ ರೈಲಿನಿಂದ ಹಳಿಗೆ ಬೀಳುವ ಸ್ಥಿತಿಯಲ್ಲಿದ್ದರು. ಈ ಸಂದರ್ಭದಲ್ಲಿ 4 ಮಂದಿ ಕೂಲಿಗಳು, ಡಾಕ್ಟರ್ ಹಾಗೂ ಇಬ್ಬರು ಪೊಲೀಸರು ನಿಲ್ದಾಣಕ್ಕೆ ದೌಡಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಇದೇ ವೇಳೆ ಇನ್ನೊಂದು ಹಳಿಯಲ್ಲಿ ಎದುರಿನಿಂದ ರೈಲು ಧಾವಿಸಿದೆ. ಪರಿಣಾಮ 5 ಮಂದಿ ಕೂಡಲೇ ಹಳಿಯಿಂದ ಹೊರಗಡೆ ಹಾರಿದ್ದಾರೆ. ಆದ್ರೆ ಇಬ್ಬರು ಕೂಲಿಗಳಿಗೆ ಮಾತ್ರ ಸಾಧ್ಯವಾಗಲಿಲ್ಲ. ಹೀಗಾಗಿ ಅವರಿಗೆ ರೈಲು ಡಿಕ್ಕಿ ಹೊಡೆದಿದೆ.

ಮೃತ ಕೂಲಿಗಳನ್ನು 50 ವರ್ಷದ ರಾಮಸತ್ರ ಪಾಸ್ವಾನ್ ಹಾಗೂ 40 ವರ್ಷದ ರಾಜ್ ಭರ್ ಎಂದು ಗುರುತಿಸಲಾಗಿದ್ದು, ಈ ಇಬ್ಬರೂ ಕಳೆದ 40ಕ್ಕೂ ಅಧಿಕ ವರ್ಷಗಳಿಂದ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ಬಳಿಕ ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಮತ್ತೊಬ್ಬ ಸಿಬ್ಬಂದಿ ಮನೋಜ್ ಚೌಹಾಣ್ ಅವರ ಕಾಲಿಗೆ ಗಾಯಗಳಾಗಿವೆ. ಇನ್ನು ಘಟನೆ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಅಂತ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿಲಾಸ್ ಚೌಗುಲೆ ತಿಳಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍