ಪ್ರತಿಭಟನೆಯ ನೆಪದಲ್ಲಿ ಕಟ್ಟಡದ ಮೇಲಿಂದ 6 ತಿಂಗಳ ಹೆಣ್ಣು ಮಗುವನ್ನು ಎಸೆದ ನಿರ್ದಯಿ ತಂದೆ..!

ಕೇಪ್ ಟೌನ್: ನಿರ್ದಯಿ ತಂದೆ ತನ್ನ 6 ತಿಂಗಳ ಹೆಣ್ಣು ಮಗುವನ್ನು ಕಟ್ಟಡದ ಮೇಲಿಂದ ಎಸೆದಿರುವ ಆಘಾತಕಾರಿ ಘಟನೆಯೊಂದು ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್ ನಗರದ ಬಳಿಯ ಕ್ವಾದ್ವೆಸಿ ಪಟ್ಟಣದಲ್ಲಿ ನಡೆದಿದೆ.

ಕ್ವಾದ್ವೆಸಿ ಪಟ್ಟಣದಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿತ್ತು. ಈ ವೇಳೆ ಸ್ಥಳೀಯರ ನಮ್ಮ ಮನೆಗಳನ್ನು ನೆಲಸಮ ಮಾಡಬಾರದೆಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 38 ವರ್ಷದ ವ್ಯಕ್ತಿಯೊಬ್ಬ ತನ್ನ 6 ತಿಂಗಳ ಹೆಣ್ಣು ಮಗುವೊಂದಿಗೆ ದಿಢೀರ್ ಅಂತಾ ಮನೆಯ ಮೇಲ್ಗಡೆ ಹತ್ತಿ ಪ್ರತಿಭಟನೆ ಮುಂದಾಗಿದ್ದನು.

ಒಂದು ವೇಳೆ ನಮ್ಮ ಮನೆಗಳನ್ನು ನಾಶ ಮಾಡಿದ್ರೆ ನನ್ನ ಮಗುವನ್ನು ಎಸೆಯುವುದಾಗಿ ಬೆದರಿಕೆ ಸಹ ಹಾಕಿದ್ದನು. ಪ್ರತಿಭಟನಾಕರೆಲ್ಲರೂ ಮಗುವನ್ನು ಎಸೆದು ಬಿಡು ಅಂತಾ ಆ ವ್ಯಕ್ತಿಗೆ ಪ್ರಚೋದನೆಯನ್ನು ಸಹ ನೀಡುತ್ತಿದ್ದರು. ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯ ಮನವೊಲಿಸಲು ಮುಂದಾಗಿ, ಮುನ್ನೆಚ್ಚರಿಕೆಗಾಗಿ ಪೊಲೀಸರು ಕಟ್ಟಡದ ಸುತ್ತ ಧಾವಿಸಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಕಟ್ಟಡದ ಮೇಲೆ ಬಂದ ಪೊಲೀಸರನ್ನು ನೋಡುತ್ತಿದ್ದಂತೆ ಆ ವ್ಯಕ್ತಿ ಮಗುವನ್ನು ಎಸೆದಿದ್ದಾನೆ.

ಇತ್ತ ಕಟ್ಟಡದ ಕೆಳಗಡೆ ಮತ್ತು ಪಕ್ಕದ ಮೇಲ್ಚಾವಣೆಗಳ ಮೇಲೆ ಪೊಲೀಸರು ನಿಂತಿದ್ದರು. ವ್ಯಕ್ತಿ ಮಗುವನ್ನು ಎಸೆಯುತ್ತಿದ್ದಂತೆ ಪಕ್ಕದ ಕಟ್ಟಡದ ಮೇಲಿದ್ದ ಪೊಲೀಸ್ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ. ನಂತರ ಸುರಕ್ಷಿತವಾಗಿ ಮಗುವನ್ನು ತಾಯಿಯ ವಶಕ್ಕೆ ನೀಡಲಾಗಿದೆ.

ಘಟನೆಯಲ್ಲಿ ಮಗುವಿಗೆ ಯಾವುದೇ ಅಪಾಯಗಳಾಗಿಲ್ಲ. ಇನ್ನು ಮಗುವಿನ ಕೊಲೆಗೆ ಮುಂದಾಗಿದ್ದ ತಂದೆಯ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍