ಪತ್ನಿಯ ಕೈಯನ್ನು ಸೀಲಿಂಗ್ ಫ್ಯಾನಿಗೆ ಕಟ್ಟಿ 3-4 ಗಂಟೆ ಹಲ್ಲೆ ಮಾಡ್ದ..!! ವಿಡಿಯೋ ಮಾಡಿ ಪತ್ನಿಯ ಪೋಷಕರಿಗೆ ಕಳುಹಿಸಿ ಬೆದರಿಸಿದ ಪತಿರಾಯ..!

ಲಕ್ನೋ: ಕ್ರೂರ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಯನ್ನು ಸೀಲಿಂಗ್ ಫ್ಯಾನ್‍ಗೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟೆನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಈ ಘಟನೆಯು ಉತ್ತರಪ್ರದೇಶದ ಷಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದ್ದು, ತವರು ಮನೆಯಿಂದ ವರದಕ್ಷಿಣೆ ತರುವಂತೆ ಹೇಳಿ ಈ ರೀತಿ ಮೃಗೀಯವಾಗಿ ವರ್ತಿಸಿದ್ದಾನೆ.

ಘಟನೆ ವಿವರ: ಕ್ರೂರ ಪತಿ ತನ್ನ ಪತ್ನಿಗೆ ತವರು ಮನೆಯಿಂದ 50,000 ರೂ. ಹಣವನ್ನು ತರುವಂತೆ ಹೇಳಿದ್ದಾನೆ. ಆದರೆ ಪತ್ನಿ ಈ ವಿಚಾರವನ್ನು ನಿರಾಕರಿಸಿದ್ದರು. ಇದರಿಂದ ಸಿಟ್ಟುಗೊಂಡ ಪತಿರಾಯ ಈ ರೀತಿ ಕ್ರೂರ ವರ್ತನೆ ತೋರಿದ್ದಾನೆ.

ಪತಿ ತನ್ನ ಪತ್ನಿಯ ಕೈಗಳನ್ನು ಆಕೆಯ ದುಪ್ಪಟ್ಟದಿಂದಲೇ ಫ್ಯಾನಿಗೆ ಕಟ್ಟಿ ಹಾಕಿದ್ದಾನೆ. ನಂತರ ಬೆಲ್ಟ್ ನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ್ದಾನೆ. ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪವರೆಗೂ ಬಿಡದೆ ಹಲ್ಲೆ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪತಿ ಮಹಾಶಯ ತಾನು ಮಾಡಿದ ಹೀನ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋವನ್ನು ಪತ್ನಿಯ ಸಹೋದರು ಮತ್ತು ಪೋಷಕರಿಗೆ ಕಳುಹಿಸಿದ್ದಾನೆ. ಅಲ್ಲದೇ ತನ್ನ ಬೇಡಿಕೆಯನ್ನು ಪೂರ್ಣಗೊಳಿಸದಿದ್ದರೆ ಮತ್ತೆ ಇದೇ ರೀತಿಯ ಘಟನೆ ಮುಂದುವರೆಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.

ಸುಮಾರು 3-4 ಗಂಟೆಗಳ ಕಾಲ ಹೊಡೆದಿದ್ದು, ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಬಳಿಕ ನನಗೆ ಎಚ್ಚರವಾಗ ನನ್ನ ಕೈಗಳು ಸೀಲಿಂಗ್ ಫ್ಯಾನ್ ಗೆ ಕಟ್ಟಿ ಹಾಕಲಾಗಿತ್ತು. ನಾನು ವಿದ್ಯಾವಂತಳಲ್ಲ. ಆದ್ದರಿಂದ ನಾನು ಈ ಸ್ಥಿತಿಯಲ್ಲಿದ್ದೇನೆ ಎಂದು ನೊಂದ ಮಹಿಳೆ ಹೇಳಿದ್ದಾರೆ.

ಆ ವಿಡಿಯೋ ಮೂಲಕ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿ ಪತಿ ಮತ್ತು ಅವನ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ದೂರು ದಾಖಲಿಸುತ್ತಿದ್ದಂತೆಯೇ ಇತ್ತ ಎಲ್ಲರೂ ತಲೆಮರೆಸಿಕೊಂಡಿದ್ದಾರೆ.ಹೀಗಾಗಿ ಇದೂವರೆಗೂ ಪತಿ ಮತ್ತು ಆತನ ಕುಟುಂಬದವರನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍