ಸಿಗದ ಸಚಿವ ಸ್ಥಾನ : ರೆಬೆಲ್ ಆದ ಕೈ ಶಾಸಕರು ಯಾರ್‍ಯಾರು..? ಮುಂದಿನ ನಿರ್ಧಾರದ ಬಗ್ಗೆ ಏನಂದ್ರು..?

ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ರಚನೆ ಇಂದು ನಡೆಯುತ್ತಿದ್ದು, ಈ ಮಧ್ಯೆ ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಘಟನೆಗಳು ನಡೆದಿವೆ.

ಅದರಲ್ಲಿ ಪ್ರಮುಖವಾಗಿ ನೋಡುವುದಾದರೆ:

1. ಎಂ.ಬಿ ಪಾಟೀಲ್

ಕೈ ಶಾಸಕ ರಾಜೀನಾಮೆ?

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಎಂ.ಬಿ ಪಾಟೀಲ್  ಮುಂದಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ತನ್ನ ಮೊದಲ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಸಚಿವ ಎಂ.ಬಿ ಪಾಟೀಲ್ ಹೆಸರು ಇತ್ತು. ಆದರೆ ಇಂದು ಪ್ರಮಾಣವಚನ ಸ್ವೀಕರಿಸುವ ಶಾಸಕರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಎಂಬಿ ಪಾಟೀಲ್ ಶಾಸಕ ಸ್ಥಾನ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಶಾಸಕರ ನಿವಾಸ ಮುಂದೆ ಎಂ.ಬಿ ಪಾಟೀಲ್ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ಮುಂದಾಗಿದ್ದರು. ಮನೆಯ ಮುಂದೆ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಪಾಟೀಲ್ ಅಭಿಮಾನಿಗಳು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ರಾಜೀನಾಮೆ ಸಂಬಂಧ ಎಂಬಿ ಪಾಟೀಲ್ ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷಕ್ಕಾಗಿ ಸಮುದಾಯವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದಾನೆ. ಈಗ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ತಮ್ಮ ಆಪ್ತರ ಜೊತೆ ಬೇಸರವನ್ನು ಪಾಟೀಲ್ ವ್ಯಕ್ತ ಪಡಿಸಿದ್ದಾರೆ.

ಸಚಿವ ಸ್ಥಾನ ಕೈ ತಪ್ಪಿತು ಯಾಕೆ ಅಂತಾ ಗೊತ್ತಿಲ್ಲ. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಜೊತೆ ಮಾತನಾಡಿ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದ್ದಾರೆ.

2.ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್

ಸ್ವಶಕ್ತಿಯಿಂದ ಮೂರು ಬಾರಿ ಶಾಸಕನಾಗಿದ್ದು, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ..

ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ನನ್ನ ಸ್ವಂತ ಶಕ್ತಿಯಿಂದನೇ, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ ಅಂತಾ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಬಿ ನಾಗರಾಜ್ ಸಚಿವ ಸ್ಥಾನಕ್ಕೆ ಸಿಗದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

ಸಂಪುಟ ರಚನೆಯ ಕಿಡಿ ಕಾಂಗ್ರೆಸ್ ಪಾಳಯದಲ್ಲಿ ಧಗಿ ಧಗಿಸುತ್ತಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದು, ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಶಾಸಕ ಎಂ.ಟಿ.ಬಿ ನಾಗರಾಜ್ ಸಹ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬೇರೆ ಪಕ್ಷದಿಂದ ಬಂದವರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರಿಗೆ ಎರಡೆರೆಡು ಸಲ ಸಚಿವರನ್ನಾಗಿ ಮಾಡಲಾಗುತ್ತಿದೆ. ನಾನು ಕಾರ್ಯಕರ್ತನಾಗಿ, ನಗರ ಸಭೆ ಸದಸ್ಯನಾಗಿ ಕಳೆದ 35 ವರ್ಷಗಳಿಂದ ಕಾಂಗ್ರೆಸ್‍ಗಾಗಿ ಕೆಲಸ ಮಾಡಿಕೊಂಡು ಬಂದರೂ, ಇಂದು ನನಗೆ ಅನ್ಯಾಯವಾಗಿದೆ ಎಂದು ಅಂತಾ ಆಕ್ರೋಶ ಹೊರಹಾಕಿದ್ರು.

ರಾಜೀನಾಮೆ ನೀಡಬಹುದು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸ್ಥಳೀಯ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರೆಲ್ಲ ಸಹ ನನಗೂ ರಾಜೀನಾಮೆ ನೀಡಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ನನಗೆ ಪಕ್ಷ, ಸಚಿವ ಸ್ಥಾನಕ್ಕಿಂತ ಕಾರ್ಯಕರ್ತರು ಮುಖ್ಯ. ಕೊನೆಯ ಕ್ಷಣದಲ್ಲಿ ಒತ್ತಡಗಳು ಹೆಚ್ಚಾದ್ರೆ ನಾನು ರಾಜೀನಾಮೆ ನೀಡುತ್ತೇನೆ ಅಂತಾ ಸ್ಪಷ್ಟಪಡಿಸಿದರು.

ಒಟ್ಟು ನಾಲ್ಕು ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದು, ಮೂರು ಬಾರಿ ಗೆಲುವನ್ನು ಕಂಡಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಎಂದು ಸ್ಪರ್ಧೆ ನಡೆದಿಲ್ಲ. ನಾಗರಾಜ್ ವರ್ಸಸ್ ಬಚ್ಚೇಗೌಡ ಅಂತಾನೇ ಸ್ಪರ್ಧೆ ನಡೆದಿರೋದು. ಒಟ್ಟಾರೆಯಾಗಿ ಬಿಜೆಪಿಯ ಪ್ರಬಲ ನಾಯಕ ಬಚ್ಚೇಗೌಡರನ್ನು ಮೂರು ಬಾರಿ ಸೋಲಿಸಿದ್ದೇನೆ. ಆದ್ರೂ ಇಂದು ನನಗೆ ಮೋಸವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗುತ್ತಿಲ್ಲ. ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿರುವ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಅವರ ಮನೆಯತ್ತ ತೆರಳುತ್ತಿದ್ದೇನೆ ಅಂತಾ ತಿಳಿಸಿದರು.

3. ಹೆಚ್.ಎಂ ರೇವಣ್ಣ

ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆ..

ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಎಚ್ ಎಂ ರೇವಣ್ಣ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಮಂಗಳವಾರ ರಾತ್ರಿ 11 ಗಂಟೆ ವರೆಗೆ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ಮಧ್ಯರಾತ್ರಿ ವೇಳೆಗೆ ಬದಲಾಗಿದೆ. ನಾನು ಕುರುಬ ಸಮಾಜ ಹಾಗು ಪಕ್ಷ ಕಟ್ಟಲು ಪ್ರಾಮಾಣಿಕವಾಗಿ ದುಡಿದಿದ್ದಕ್ಕೆ ಪಕ್ಷ ನನಗೆ ನೀಡಿದ ಗೌರವ ಎಂದು ತಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೊರ ಹಾಕಿದ್ದಾರೆ.

ಕುಮಾರಸ್ವಾಮಿ ಸಂಪುಟದಲ್ಲಿ ಕುರುಬ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣೆನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕುರುಬ ಸಮುದಾಯದ ಶಾಸಕರು ಸಿಡಿದೆದ್ದು ಆಕ್ರೋಶ ವ್ಯಕ್ತಡಿಸಿದ್ದಾರೆ. ಕುರುಬರಿಗೆ ಅನ್ಯಾಯ ಮಾಡಲಾಗಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಗೆ ನೀಡಿದ್ದಾರೆ. ಅಲ್ಲದೇ ಮುಂದೇನು ಮಾಡಬೇಕೆಂಬ ಬಗ್ಗೆ ಚಿಂತನೆ ನಡೆಸಲು ಸದ್ಯದಲ್ಲೇ ಸಭೆ ನಡೆಸಲು ತಿರ್ಮಾನಿಸಿದ್ದಾರೆ.

ಕುರುಬ ಹಾಗೂ ಮುಸ್ಲಿಂ ಸಮುದಾಯ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪರವಾಗಿ ಮತ ನೀಡಿದೆ. ಈ ಎರಡೂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ. ಈ ಎರಡು ಸಮಾಜಗಳನ್ನು ತುಳಿಯಲು ಕಾಣದ ಕೈಗಳು ಕೆಲಸ ಮಾಡಿವೆ. ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಈ ಬೆಳವಣಿಗೆ ಆಘಾತ ತಂದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಪಕ್ಷದ ಗತಿಯೇನು ಎಂದು ರೇವಣ್ಣ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

4.ಶಾಮನೂರು ಶಿವಶಂಕರಪ್ಪ

ಕೈ ಕಾರ್ಪೊರೇಟರ್ ರಾಜೀನಾಮೆ

ರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರಿಗೆ ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಶಿವಗಂಗಾ ಬಸವರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಕಳೆದ 45 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು, ಆದ್ರೆ ಅಂತ ಒಬ್ಬ ನಾಯಕನಿಗೆ ಸಚಿವ ಸ್ಥಾನ ನೀಡದೇ ವೀರಶೈವ ಲಿಂಗಾಯತರಿಗೆ ಅನ್ಯಾಯವಾಗಿದೆ. ಈ ಕುರಿತು ಬೆಂಬಲಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯ ಒಳಗಡೆ ಸಚಿವ ಸ್ಥಾನ ನೀಡದಿದ್ದರೆ ಮಹಾನಗರ ಪಾಲಿಕೆಯ 39 ಸದಸ್ಯರು ಕೂಡ ರಾಜೀನಾಮೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

5. ಬಿ.ಸಿ. ಪಾಟೀಲ್ 

ನನಗೆ ಸ್ಥಾನ ಕೊಡದಿರುವುದು ಕಾಂಗ್ರೆಸ್ಸಿಗೆ ಅತೀ ದೊಡ್ಡ ನಷ್ಟವಾಗಲಿದೆ..

ಸಚಿವ ಸಂಪುಟ ರಚನೆ ಕಸರತ್ತಿನಲ್ಲಿ ಕೊನೆಗೂ ಕಾಂಗ್ರೆಸ್ ತಮ್ಮ ಸಚಿವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಾಸಕ ಬಿಸಿ ಪಾಟೀಲ್ ಅವರ ಹೆಸರನ್ನು ಕೈಬಿಡಲಾಗಿದೆ. ಇದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿ ಗೆದ್ದಿದ್ದೇನೆ. ನಾನು ಏಕೈಕ ಶಾಸಕನಾಗಿದ್ದರೂ, ನನಗೆ ಸಚಿವ ಸ್ಥಾನ ಕೊಡಲಿಲ್ಲ. ಇದರಿಂದ ನಮ್ಮ ಜಿಲ್ಲೆಯವರಿಗೆ ಬೇಸರವಾಗಿದೆ. ಇನ್ನು ಮುಂದೆ ಅವರು ಹೇಗೆ ಕಾಂಗ್ರೆಸ್ ಗೆ ಬೆಂಬಲಿಸುತ್ತಾರೆ. ಯಾವ ರೀತಿ ಪಟ್ಟಿ ಆಯ್ಕೆ ಮಾಡಿದ್ದಾರೆ ನನಗೆ ತಿಳಿದಿಲ್ಲ ಎಂದು ಆಕ್ರೋಶದಿಂದ ಹೇಳಿದ್ದಾರೆ.

ಬಿಜೆಪಿಯವರು ಸಚಿವ ಸ್ಥಾನ, ಆಸೆ ಆಮಿಷ ಒಡ್ಡಿದ್ರೂ, ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಬಹುಶಃ ನಾನು ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ. ಹಣಕ್ಕಾಗಿ, ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿಯಲ್ಲ ನಾನು. ಅಂತಹ ಭಾವನೆ ನನಗೆ ಇಲ್ಲ, ಆದರೆ ನನಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಇದರಿಂದ ನನಗೆ ನೋವಾಗಿದೆ. ನನ್ನ ಬೆಂಬಲಿಗರಿಗೂ ನೋವಾಗಿದೆ ಎಂದು ಬೇಸರದಿಂದ ಹೇಳಿದರು.

ಸಚಿವರ ಪಟ್ಟಿಯಿಂದ ವೈಯಕ್ತಿಯವಾಗಿ ನನಗೆ ನಷ್ಟವಾಗಿಲ್ಲ. ಕಾಂಗ್ರೆಸ್ ಪಕ್ಷ ದೊಡ್ಡ ನಷ್ಟ ಅನುಭವಿಸುತ್ತದೆ. ನಾನು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲ. ಕಾಂಗ್ರೆಸ್ ನ ಆಡಳಿತ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.

ನನಗೆ ಯಾವುದೇ ಗಾಡ್ ಫಾದರ್ ಇಲ್ಲ. ಹಣ ಕೂಡ ಇಲ್ಲ ಅದಕ್ಕಾಗಿ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಬರಲ್ಲ. ಬಂದರೆ ನೋಡೋಣ. ಬರಲಿಲ್ಲ ಅಂದರೆ ಜನರು ಶಾಸಕರಾಗಿ ಗೆಲ್ಲಿಸಿದ್ದಾರೆ. ಅವರ ಕೆಲಸ ಮಾಡುತ್ತೇನೆ. ನಾನು ಬಹಳಷ್ಟು ಪ್ರಯಾಣಿಕವಾಗಿ ಇದ್ದೆ. ಈಗ ಅದೇ ತ್ಪಪ್ಪಾಯಿತು ಅಂತ ವಿಷಾದ ವ್ಯಕ್ತಪಡಿಸಿದ್ರು.

6. ಎಸ್.ಸಿ.ಶಿವಳ್ಳಿ

ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಕೈ ಶಾಸಕ

ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 9 ಕಾಂಗ್ರೆಸ್ ಶಾಸಕರು ಜಯಗಳಿಸಿದ್ದೇವೆ. ಅವರಲ್ಲಿ ನಾನು ಹಿರಿಯ ಸ್ಥಾನದಲ್ಲಿದ್ದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇತ್ತು ಎಂದು ಶಾಸಕ ಎಸ್.ಸಿ.ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಕುರುಬ ಸಮಾಜದ ಪ್ರಭಾವಿ ವ್ಯಕ್ತಿಯಾಗಿರುವೆ. ಅಲ್ಲದೇ ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ನನಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಗಾಢವಾಗಿತ್ತು. ಆದರೆ ನನ್ನ ಹೆಸರು ಸಚಿವರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಿದ್ದು, ಭಾರೀ ನಿರಾಶೆ ಉಂಟಾಗಿದೆ ಎಂದು ಅವರು ಹೇಳಿದರು.

ಮುಂದಿನ ಕ್ರಮದ ಬಗ್ಗೆ ಕ್ಷೇತ್ರ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸುತ್ತೇನೆ. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರಲ್ಲಿ ಆತಂಕ ಮೂಡಿಸಿದ್ದಾರೆ.

ಇತ್ತ ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಸಿ.ಎಸ್ ಶಿವಳ್ಳಿ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು, ಪಕ್ಷದ ಮುಖಂಡರ ಜತೆ ಚರ್ಚೆಗೆ ಶಿವಳ್ಳಿ ನಕಾರ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: