ಬಿಎಸ್‌ವೈಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟಿದ್ದೇಕೆ..? ರಾಜ್ಯಪಾಲರು ಕೊಟ್ಟಿದ್ದಾರೆ ಈ ಕಾರಣಗಳು

ಬೆಂಗಳೂರು: ಒಂದು ಬಹುಮತ ಪಡೆಯದ ಬಿಜೆಪಿ ಪಕ್ಷ, ಇನ್ನೊಂದು ಕಡೆ ಬಹುಮತವಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ. ಇಬ್ಬರು ಕೂಡ ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಅಡಕತ್ತರಿಯಲ್ಲಿ ಸಿಲುಕಿದ್ದ ರಾಜ್ಯಪಾಲರು ಕಾನೂನಿನ ಎಲ್ಲಾ ಆಯಾಮಗಳನ್ನ ಅಳೆದು ತೂಗಿ ಕೊನೆಗೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರೋ ಬಿಜೆಪಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲದೇ, 15 ದಿನದ ಒಳಗಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾ ಕಾನೂನು ತಜ್ಞರ ಜೊತೆ ಚರ್ಚಿಸಿ, ಪರಾಮರ್ಶಿಸಿ ಈ ನಿರ್ಧಾರ ತೆಗೆದಕೊಂಡಿದ್ದಾರೆ. ಅಲ್ಲದೇ, 5 ಕಾರಣಗಳ ಆಧಾರದ ಮೇಲೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಆ ಕಾರಣಗಳು ಏನೇನು ಎಂಬ ಮಾಹಿತಿ ಹೀಗಿದೆ.

ರಾಜ್ಯಪಾಲರ ಪರಿಗಣಿಸಿರುವ ಆ ಕಾರಣಗಳೇನು?

1. ಪುಂಚಿ ಆಯೋಗದ ವರದಿ
ಏಪ್ರಿಲ್​​ 27, 2007 ರಲ್ಲಿ ಭಾರತ ಸರ್ಕಾರ, ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯನ್ಯಾಯಮೂರ್ತಿ ಮದನ್​​ ಮೋಹನ್​​ ಪುಂಚಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧಗಳ ವಿಶ್ಲೇಷಣೆ ಮಾಡುವ ನಿಟ್ಟಿನಲ್ಲಿ ಆಯೋಗವೊಂದನ್ನ ರಚಿಸಿತ್ತು. 2010 ರ ಮಾರ್ಚ್​ 30 ರಂದು ಪ್ರಕಟಿಸಿದ ಕಮಿಷನ್​​ನ ವರದಿಯಲ್ಲಿ ಮುಖ್ಯಮಂತ್ರಿ ನೇಮಕಾತಿಯಲ್ಲಿ ರಾಜ್ಯಪಾಲರು ಅನುಸರಿಸಬೇಕಾದ ನಿಬಂಧನೆಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಹಂಗ್​ ಅಸೆಂಬ್ಲಿ ಸೃಷ್ಟಿಯಾದಲ್ಲಿ ರಾಜ್ಯಪಾಲರು ಅನುಸರಿಸಬೇಕಾದ ಮಾರ್ಗ ಸೂಚಿಗಳನ್ನ ದೃಢೀಕರಿಸಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಬಹುದು. ಇತರರ ಬೆಂಬಲದೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊಮ್ಮಿದ ಪಾರ್ಟಿಗೆ ಆಹ್ವಾನ ನೀಡಬಹುದು. ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಪಕ್ಷದ ನಾಯಕನನ್ನು ಸರ್ಕಾರ ರಚನೆಗೆ ಬುಲಾವ್​ ನೀಡಬಹುದು. ಸರ್ಕಾರದಲ್ಲಿ ಪಾಲ್ಗೊಳ್ಳುವ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಹಾಗೂ ಸ್ವತಂತ್ರ ಹಾಗೂ ಇತರರ ಬಹಿರಂಗ ಬೆಂಬಲದೊಂದಿಗೆ ಪ್ರಸ್ತಾವನೆ ಸಲ್ಲಿಸುವ ನಾಯಕನಿಗೂ ರಾಜ್ಯಪಾಲರು ಅವಕಾಶ ಕಲ್ಪಿಸಬಹುದು ಎಂದು ವರದಿ ನೀಡಿತ್ತು.

2. ಬೊಮ್ಮಾಯಿ ಪ್ರಕರಣ
1988ರಲ್ಲಿ ಜನತಾ ದಳ ಸರ್ಕಾರ ಅಸ್ತಿತ್ವ ಬಂದಿತ್ತು. ಎಸ್‌.ಆರ್‌.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1989, ಏಪ್ರಿಲ್‌ನಲ್ಲಿ ಸ್ವಪಕ್ಷದ ಕೆಲ ಶಾಸಕರು ರಾಜ್ಯಪಾಲರನ್ನ ಭೇಟಿಯಾಗಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರು. ಶಾಸಕರ ಪತ್ರ ಆಧರಿಸಿ ರಾಜ್ಯಪಾಲರು ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿದ್ದರು. ಈ ನಿರ್ಧಾರವನ್ನ ಬೊಮ್ಮಾಯಿ ಅವರು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. 1994ರಲ್ಲಿ ಸುಪ್ರೀಂಕೋರ್ಟ್‌, ‘ಸರ್ಕಾರ ಬಹುಮತ ಹೊಂದಿದೆಯೇ ಇಲ್ಲವೇ ಎಂಬುದು ಶಾಸನಸಭೆಯಲ್ಲೇ ನಿರ್ಧಾರ ಆಗಬೇಕು. ಯಾವುದೇ ವ್ಯಕ್ತಿಯೊಬ್ಬರ ಖಾಸಗಿ ಅಭಿಪ್ರಾಯದ ಆಧಾರದಲ್ಲಿ ಅಥವಾ ರಾಜಭವನ ಇಲ್ಲವೇ ರಾಷ್ಟ್ರಪತಿ ಭವನದಲ್ಲಿ ಅದು ನಿರ್ಧಾರ ಆಗಬಾರದು. ಮುಕ್ತ ಮತ್ತು ನ್ಯಾಯಸಮ್ಮತ ವಿಶ್ವಾಸಮತ ಯಾಚನೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆದ ಸಂದರ್ಭದಲ್ಲಷ್ಟೇ ಅದನ್ನು ಮೀರಿ ನಿರ್ಧಾರ ಕೈಗೊಳ್ಳಲು ಅವಕಾಶವಿದೆ’ ಸುಪ್ರೀಂಕೋರ್ಟ್ ಆದೇಶಿಸಿತ್ತು.

3. ಸರ್ಕಾರಿಯಾ ಕಮಿಷನ್ ವರದಿ:
1983ರಲ್ಲಿ ಕೇಂದ್ರ ಸರ್ಕಾರ ನ್ಯಾ.ರಂಜಿತ್ ಸಿಂಗ್ ಸರ್ಕಾರಿಯಾ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಬಂಧ ಮತ್ತು ಅಧಿಕಾರ ಸಮತೋಲನ ಹೇಗಿರಬೇಕು ಎಂಬ ಬಗ್ಗೆ ವರದಿ ನೀಡುವಂತೆ ಆಯೋಗ ರಚಿಸಿತ್ತು. ಈ ವರದಿಯಲ್ಲೂ ಕೂಡ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷಕ್ಕೆ ಸರ್ಕಾರ ರಚಿಸುವಂತೆ ಆಹ್ವಾನಿಸಬಹುದು ಎಂದು ಉಲ್ಲೇಖಿಸಲಾಗಿತ್ತು. ಇದಲ್ಲದೇ, ನಬೀಂ ತೂಚಿ ಹಾಗೂ ಗೋವಾ ಸರ್ಕಾರದ ಪ್ರಕರಣಗಳನ್ನ ಪರಾಮರ್ಶಿಸಿ ಗವರ್ನರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍