ಜೆಡಿಎಸ್ ನಿಂದ ಯಾರ್‍ಯಾರಿಗೆ ಸಚಿವ ಸ್ಥಾನ ಸಿಗಲಿದೆ ಗೊತ್ತಾ..?

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದು, ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇವರಿಬ್ಬರು ಅಧಿಕಾರ ಸ್ವೀಕರಿಸಿ ವಾರ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ. ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳಿಗಾಗಿ ಎರಡೂ ಪಕ್ಷಗಳು ಪಟ್ಟು ಹಿಡಿದದ್ದೇ ಇದಕ್ಕೆ ಕಾರಣ.

ಇದೀಗ ಆ ಬಿಕ್ಕಟ್ಟು ಬಗೆಹರಿದಿದ್ದು, ಹಣಕಾಸು ಇಲಾಖೆ ಜೆಡಿಎಸ್ ಕೈಸೇರಿದೆ. ಸಂಪುಟ ರಚನೆ ಬಿಕ್ಕಟ್ಟು ಬಗೆಹರಿದ ಹಿನ್ನೆಲೆಯಲ್ಲಿ ತಮ್ಮ ಪಕ್ಷದಿಂದ ಯಾರು ಸಚಿವರಾಗಬೇಕು ಎಂಬುದರ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸದಲ್ಲಿ ಬುಧವಾರ ಸಂಜೆ ಚರ್ಚೆ ನಡೆದಿದ್ದು, ಸಂಭವನೀಯ ಸಚಿವರ ಪಟ್ಟಿ ಕೆಳಗಿನಂತಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದ ಹೆಚ್.ಡಿ. ರೇವಣ್ಣ, ಅರಸೀಕೆರೆಯ ಕೆ.ಎಂ. ಶಿವಲಿಂಗೇಗೌಡ, ಮೈಸೂರು ಜಿಲ್ಲೆಯ ಹುಣಸೂರಿನ ಹೆಚ್. ವಿಶ್ವನಾಥ್, ಚಾಮುಂಡೇಶ್ವರಿಯ ಜಿ.ಟಿ. ದೇವೇಗೌಡ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಸಿ.ಎಸ್. ಪುಟ್ಟರಾಜು, ಬೀದರ್ ನ ಬಂಡೆಪ್ಪ ಕಾಶೆಂಪುರ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಗೋಪಾಲಯ್ಯ, ಮಿತ್ರಪಕ್ಷ ಬಹುಜನ ಸಮಾಜ ಪಾರ್ಟಿಯ ಕೊಳ್ಳೇಗಾಲದ ಶಾಸಕ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಚಿವರಾಗಲಿದ್ದಾರೆನ್ನಲಾಗಿದೆ.

ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಜೂನ್ 11 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಯಾಗಿದ್ದು, ಆಯ್ಕೆಯಾದ ಬಳಿಕ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಕಾಂಗ್ರೆಸ್ ಪಕ್ಷ ಕೂಡ ತನ್ನ ಸಚಿವರುಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ನೂತನ ಸಚಿವರುಗಳು ಬಹುತೇಕ ಜೂನ್ ಎರಡರ ಶನಿವಾರದಂದು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍