ಕೆಕೆಆರ್​ ಬೃಹತ್ ಮೊತ್ತದ ಮುಂದೆ ಮಂಡಿಯೂರಿದ ಕಿಂಗ್ಸ್ ಇಲೆವೆನ್​ : ಕೆ ಎಲ್ ರಾಹುಲ್ ಸಮಯೋಚಿತ ಆಟ ವ್ಯರ್ಥ..!!

ಕೋಲ್ಕತ್ತ ನೈಟ್​ ರೈಡರ್ಸ್​ ತಂಡದ ಬ್ಯಾಟ್ಸ್​ಮನ್​ಗಳು ತಮ್ಮ ಭಯಂಕರ ಬ್ಯಾಟಿಂಗ್ ಬಲವನ್ನ ಪ್ರದರ್ಶಿಸಿದ್ದಾರೆ. ಬೃಹತ್​ ಬ್ಯಾಟಿಂಗ್ ಪಡೆಯನ್ನ ಹೊಂದಿದ್ದ ಕಿಂಗ್ಸ್ ಇಲವೆನ್​ ಪಂಜಾಬ್ ತಂಡಕ್ಕೆ ಬಿಗ್​ ಸ್ಕೋರ್ ನೀಡಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದು ಇಂದೋರ್​ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್​ 31 ರನ್​ಗಳ ಗೆಲುವನ್ನ ಪಡೆದುಕೊಂಡಿದೆ.

ಈ ಬಾರಿಯ ಐಪಿಎಲ್​ನ ಬಿಗ್ ಟಾರ್ಗೆಟ್​ ನೀಡಿದ ಕೆಕೆಆರ್​

ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್​, ಓಪನರ್​ ಸುನೀಲ್​ ನರೈನ್​ ಹಾಗೂ ಕ್ಯಾಪ್ಟನ್​ ದಿನೇಶ್​ ಕಾರ್ತಿಕ್​ ಅವರ ಅರ್ಧಶತಕಗಳ ನೆರವಿನಿಂದ ಬಿಗ್​ ಸ್ಕೋರ್​ ದಾಖಲಿಸಿತು. ಸುನೀಲ್​ ನರೈನ್​ 36 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 9 ಬೌಂಡರಿಗಳ ಮೂಲಕ ಭರ್ಜರಿ 75 ರನ್​ ಸಿಡಿಸಿದ್ದಾರೆ. ಕ್ಯಾಪ್ಟನ್​ ದಿನೇಶ್​ ಕಾರ್ತಿಕ್​​ 23 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 5 ಬೌಂಡರಿ ಮೂಲಕ  50 ರನ್​ ಬಾರಿಸಿದ್ದಾರೆ.

ಓಪನರ್ ಕ್ರಿಸ್​ ಲಿನ್​ 27, ಉತ್ತಪ್ಪ 24, ರಸೆಲ್​ 31, ನಿತೀಶ್​ ರಾಣಾ 11, ಶುಭ್​ಮನ್​ ಗಿಲ್​ 16 ರನ್​ಗಳ ಮೂಲಕ ತಂಡ ಬಿಗ್​ ಸ್ಕೋರ್ ದಾಖಲಿಸಲು ನೆರವಾದರು. 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡ ನೈಟ್​ರೈಡರ್ಸ್​ 245 ರನ್​ ಒಟ್ಟು ಮೊತ್ತ ದಾಖಲಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್​

ಕೆಕೆಆರ್​ ನೀಡಿದ್ದ ಐಪಿಎಲ್​ನ ಈ ಬಾರಿಯ ಬೃಹತ್ ಟಾರ್ಗೆಟ್​ ಆದ 246 ರನ್​ ಗುರಿ ಬೆನ್ನತ್ತಿದ ಪಂಜಾಬ್​, ಉತ್ತಮ ಆರಂಭವನ್ನೇ ಪಡೆಯಿತು.

ಆದರೆ, ಕೆಎಲ್​ ರಾಹುಲ್​ ಜೊತೆಗೆ ಬಹುಕಾಲ ನಿಲ್ಲಲು ವಿಫಲವಾದ ಗೇಲ್​, 21 ರನ್​ ಗಳಿಸಿ ಔಟಾದರು. ನಂತರ ತಂಡಕ್ಕೆ ಆಸರೆಯಾಗಬೇಕಿದ್ದ ಮಯಾಂಕ್​ ಅಗರ್ವಾಲ್​ 0, ಕರುಣ್​ ನಾಯರ್​​ 3 ರನ್​ ಗಳಿಸಿ ತಂಡವನ್ನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದರು.

ಮಿಂಚಿದ ಕೆಎಲ್ ರಾಹುಲ್​

ಇಷ್ಟೆಲ್ಲ ಇಕ್ಕಟ್ಟಿನ ಮಧ್ಯೆಯೂ ಸಿಕ್ಸರ್​ ಸುರಿಮಳೆ ಸುರಿಸಿದ ಓಪನರ್ ಕೆಎಲ್​ ರಾಹುಲ್​ ಭರ್ಜರಿ ಅರ್ಧಶತಕ ಸಿಡಿಸಿದರು. ಕೇವಲ 29 ಎಸೆತಗಳನ್ನೆದುರಿಸಿದ ರಾಹುಲ್​, 7 ಸಿಕ್ಸರ್​ ನೆರವಿನಿಂದ 66 ರನ್ ಸಿಡಿಸಿದರು.

ಆರೋನ್​ ಫಿಂಚ್​ 34 ಹಾಗೂ ಅಕ್ಷರ್​ ಪಟೇಲ್​ 19 ರನ್​ ಗಳಿಸಿ ತಂಡಕ್ಕೆ ಕೆಲ ಕಾಲ ಚೇತರಿಕೆ ನೀಡಿದರು. ಆದರೆ, ಬೃಹತ್ ಮೊತ್ತ ಬೆನ್ನತ್ತಲು ಇದು ಸಾಕಾಗಲಿಲ್ಲ. ಕೊನೆಯಲ್ಲಿ, ನಾಯಕ ಆರ್​. ಅಶ್ವಿನ್​ 45 ರನ್​ ಗಳಿಸಿ ಗೆಲುವಿನ ಅಂತರವನ್ನ ತಗ್ಗಿಸಿದರು. 20 ಓವರ್​ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ಪಂಜಾಬ್​ 214 ರನ್​​ ಗಳಿಸಲು ಶಕ್ತವಾಯಿತು. ಈ ಮೂಲಕ 31 ರನ್​ ಅಂತರದಿಂದ ಕೋಲ್ಕತ್ತ ನೈಟ್​ರೈಡರ್ಸ್​ಗೆ ಶರಣಾಯಿತು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍