ನಾಯಕತ್ವ ತ್ಯಜಿಸಿದ ಗೌತಮ್ ಗಂಭೀರ್ : ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಹೊಸ ಕ್ಯಾಪ್ಟನ್ ಯಾರು ಗೊತ್ತಾ..?

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ನಲ್ಲಿ ಸೋಲಿನ ಸುಳಿಯಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನಿರಾಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದು, ಯುವ ಆಟಗಾರ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ಪಟ್ಟ ನೀಡಲಾಗಿದೆ.

ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಗೌತಮ್ ಗಂಭೀರ್ ತಂಡದ ನಿರಾಸ ಪ್ರದರ್ಶನದ ಹೊಣೆ ಹೊತ್ತು ಸ್ವತಃ ನಾಯಕತ್ವ ಪಟ್ಟದಿಂದ ಬುಧವಾರ ಹಿಂದೆ ಸರಿದಿದ್ದಾರೆ. ಗೌತಿ ಸ್ಥಾನಕ್ಕೆ ಯಂಗ್ ಬ್ಯಾಟ್ಸ್​​​ಮನ್ ಶ್ರೇಯಸ್ ಅಯ್ಯರ್ ಅವರನ್ನ ಡೆಲ್ಲಿ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಬುಧವಾರ ಡೆಲ್ಲಿ ಟೀಮ್ ಮ್ಯಾನೇಜ್​​​​ಮೆಂಟ್ ಅಧಿಕೃತ ಆದೇಶ ಹೊರಡಿಸಿದೆ..

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್ ನಾಯಕತ್ವ ತೊರೆಯುವ ಸಂಗತಿ ನನ್ನ ಸ್ವತಃ ನಿರ್ಧಾರವಾಗಿದ್ದು, ತನ್ನ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೇ ನನ್ನ ನಿರ್ಧಾರದ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದ ಬಳಿಕ ಹಲವು ಸುತ್ತು ಚರ್ಚೆಗಳು ನಡೆಸಲಾಗಿದೆ ಎಂದರು.

ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6 ಪಂದ್ಯಗಳನ್ನು ಆಡಿದೆ. ಉಳಿದಂತೆ 8 ರ ಘಟಕ್ಕೆ ತಲುಪಲು ಇನ್ನು 8 ಪಂದ್ಯಗಳನ್ನು ಆಡಬೇಕಿದೆ. ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಪಡೆದಿದೆ. ಟೂರ್ನಿಯಲ್ಲಿಯ ಮಧ್ಯದಲ್ಲಿ ತಂಡದ ನಾಯತ್ವ ಬದಲಾವಣೆ ಮಾಡುವುದು ತಂಡದ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡಲಿದೆ ಎಂಬ ಅಂಶದ ಬಳಿಕವೂ ಗಂಭೀರ್ ಅವರ ನಿರ್ಧಾರದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲಿನ ಬಳಿಕ ಗಂಭೀರ್ ತಂಡದ ನಾಯಕತ್ವ ತೊರೆಯುವ ನಿರ್ಧಾರವನ್ನು ತಂಡದ ಮ್ಯಾನೇಜ್ ಮೆಂಟ್ ಮುಂದೇ ತಿಳಿಸಿದ್ದರು. ಬಳಿಕ ಹಲವು ಬಾರಿ ಚರ್ಚೆ ನಡೆಸಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಟಿಂಗ್ ಹಾಗೂ ಗಂಭೀರ್ ಜಂಟಿಯಾಗಿ ನಿರ್ಧಾರ ಪ್ರಕಟಿಸಿದ್ದಾರೆ.

ನಾಯಕತ್ವದ ಬದಲಾವಣೆ ನಿರ್ಧಾರದಿಂದ ಮುಂದಿನ ಕೊಲ್ಕತ್ತಾ ವಿರುದ್ಧದ ಪಂದ್ಯವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಗಂಭೀರ್ ಅವರ ಈ ನಿರ್ಧಾರಕ್ಕೆ ವೈಯಕ್ತಿಕವಾಗಿ ಅವರು ತಂಡಕ್ಕೆ ರನ್ ಕೊಡುಗೆ ನೀಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಟೂರ್ನಿಯಲ್ಲಿ ಗಂಭೀರ್ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು, ಬಳಿಕ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಟೂರ್ನಿಯಲ್ಲಿ ಒಟ್ಟಾರೆ 6 ಪಂದ್ಯಗಳಿಂದ ಗಂಭೀರ್ 85 ರನ್ ಗಳಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು.

ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಆರ್ ಸಿಬಿ ಹಾಗೂ ಚೆನ್ನೈ ತಂಡಗಳ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಪಡೆಯಲು ವಿಫಲವಾಗಿತ್ತು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍