ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್ : ಕೊಹ್ಲಿ ಫೈಟಿಂಗ್ ಸೆಂಚುರಿ..! ಸ್ಕೋರ್‌ಬೋರ್ಡ್ ಇಲ್ಲಿದೆ.

ಬರ್ವಿುಂಗ್​ಹ್ಯಾಂ: ಅದೃಷ್ಟದ ಆಟದಲ್ಲಿ ಹಲವು ಬಾರಿ ಜೀವದಾನ ಪಡೆದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ನೆಲದಲ್ಲಿ ನಾಯಕನಾಗಿ ಆಡಿದ ಮೊದಲ ಇನಿಂಗ್ಸ್​ನಲ್ಲಿಯೇ ಅವಿಸ್ಮರಣೀಯ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾದ ನೆರವಿಗೆ ನಿಂತರು. ಈ ಬಾರಿಯ ಪ್ರವಾಸದ ವೇಳೆ ತಾವು ಭಿನ್ನ ಹಾಗೂ ಚಾಂಪಿಯನ್ ಆಟಗಾರ ಎನ್ನುವುದನ್ನು ಮೊದಲ ಇನಿಂಗ್ಸ್​ನಲ್ಲಿಯೇ ತೋರಿಸಿದ ವಿರಾಟ್ ಕೊಹ್ಲಿ, ಏಕಾಂಗಿಯಾಗಿ ಆಂಗ್ಲರ ಬೌಲಿಂಗ್ ವಿಭಾಗವನ್ನು ಎದುರಿಸಿ ನಿಲ್ಲುವ ಮೂಲಕ ಆಪದ್ಭಾಂದವರೆನಿಸಿದರು.

ಎಜ್​ಬಾಸ್ಟನ್ ಮೈದಾನದಲ್ಲಿ ಗುರುವಾರ 9 ವಿಕೆಟ್​ಗೆ 285 ರನ್​ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್, ಈ ಮೊತ್ತಕ್ಕೆ 2 ರನ್ ಸೇರಿಸಿ ಆಲೌಟ್ ಆಯಿತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ, ಯುವ ವೇಗಿ ಸ್ಯಾಮ್ ಕರ›ನ್ (74ಕ್ಕೆ 4) ಮಾಂತ್ರಿಕ ಎಸೆತಗಳಿಗೆ ದಿಕ್ಕುತಪು್ಪವ ಲಕ್ಷಣ ಕಂಡರೂ, ವಿರಾಟ್ ಕೊಹ್ಲಿಯ (149ರನ್, 225 ಎಸೆತ, 22 ಬೌಂಡರಿ, 1 ಸಿಕ್ಸರ್) ಟೆಸ್ಟ್​ನ 22ನೇ ಹಾಗೂ ನಾಯಕನಾಗಿ 15ನೇ ಶತಕ ತಂಡದ ನೆರವಿಗೆ ಬಂದಿತು. 2ನೇ ದಿನದ ಚಹಾ ವಿರಾಮದ ಬಳಿಕ ಭಾರತ 76 ಓವರ್​ಗಳಲ್ಲಿ 274 ರನ್​ಗೆ ಆಲೌಟ್ ಆಯಿತು. ಕೇವಲ 13 ರನ್​ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 3.4 ಓವರ್​ಗಳಲ್ಲಿ 1 ವಿಕೆಟ್​ಗೆ 9 ರನ್​ಗಳಿಸಿದ್ದು, ಒಟ್ಟಾರೆ 22 ರನ್ ಮುನ್ನಡೆಯಲ್ಲಿದೆ. 14 ಎಸೆತ ಆಡಿದ ಅಲಸ್ಟೈರ್ ಕುಕ್, ಅಶ್ವಿನ್​ಗೆ ಬೌಲ್ಡ್ ಆಗುವುದರೊಂದಿಗೆ ದಿನದಾಟ ಮುಕ್ತಾಯ ಕಂಡಿತು. ಕೀಟನ್ ಜೆನ್ನಿಂಗ್ಸ್ (5) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್​ನ 287 ರನ್​ಗೆ ಪ್ರತಿಯಾಗಿ ಭಾರತ ಎಚ್ಚರಿಕೆಯ ಆರಂಭ ಕಂಡಿತು. ಏಷ್ಯಾದ ಹೊರಗಡೆ 3ನೇ ಬಾರಿಗೆ ಮೊದಲ ವಿಕೆಟ್​ಗೆ ಅರ್ಧಶತಕದ ಜತೆಯಾಟವಾಡಿದ ಶಿಖರ್ ಧವನ್ (26ರನ್, 46 ಎಸೆತ, 3 ಬೌಂಡರಿ) ಹಾಗೂ ಮುರಳಿ ವಿಜಯ್ (20 ರನ್, 45 ಎಸೆತ, 4 ಬೌಂಡರಿ) ಇಂಗ್ಲೆಂಡ್​ಗೆ ಸವಾಲೊಡ್ಡಿದರು. ಜೇಮ್್ಸ ಆಂಡರ್​ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಕೆಲ ಆತಂಕದ ಕ್ಷಣಗಳನ್ನು ನೀಡಿದರೂ ಅದೆಲ್ಲವನ್ನು ಸಾವರಿಸಿಕೊಂಡು 13ನೇ ಓವರ್ ವರೆಗೆ ಕ್ರೀಸ್​ನಲ್ಲಿದ್ದ ಜೋಡಿ ಆ ಬಳಿಕ ಬೇರ್ಪಟ್ಟಿತು.

ಎಡಗೈ ವೇಗಿ ಸ್ಯಾಮ್ ಕರ›ನ್ ತಾವೆಸೆದ 3ನೇ ಓವರ್​ನಲ್ಲಿ ವಿಜಯ್ರ ವಿಕೆಟ್​ಅನ್ನು ಡಿಆರ್​ಎಸ್ ಮೂಲಕ ಪಡೆದುಕೊಂಡರೆ, ಕ್ರೀಸ್​ಗೆ ಇಳಿದ ಮೊದಲ ಎಸೆತವನ್ನು ಬ್ಯಾಕ್​ವರ್ಡ್ ಪಾಯಿಂಟ್​ನಲ್ಲಿ ಬೌಂಡರಿ ಬಾರಿಸಿದ ಕೆಎಲ್ ರಾಹುಲ್ (4) ಮರು ಎಸೆತದಲ್ಲಿ ಅತ್ಯಂತ ಕೆಟ್ಟ ರೀತಿಯಲ್ಲಿ ಬೌಲ್ಡ್ ಆದರು. ಒಂದೇ ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮತ್ತೊಂದು ಬರೆ ಎನ್ನುವಂತೆ ಧವನ್ ಕೂಡ ಕರ›ನ್​ರ ಮರು ಓವರ್​ನಲ್ಲಿ ಸ್ಲಿಪ್​ನಲ್ಲಿ ಮಲಾನ್​ಗೆ ಕ್ಯಾಚ್ ನೀಡಿದರು. ಕರ›ನ್​ರ 9 ಎಸೆತಗಳು ಭಾರತದ ಬ್ಯಾಟಿಂಗ್ ವಿಭಾಗವನ್ನು ಛಿದ್ರಗೊಳಿಸಿದ್ದವು. ಬಳಿಕ ಕೊಹ್ಲಿ ಹಾಗೂ ರಹಾನೆ ಬಲ ನೀಡಿದ್ದರಿಂದ ಭಾರತ 3 ವಿಕೆಟ್​ಗೆ 76 ರನ್​ನೊಂದಿಗೆ ಭೋಜನ ವಿರಾಮಕ್ಕೆ ತೆರಳಿತ್ತು.

10 ಎಸೆತಗಳಲ್ಲಿ ಮುಗಿದ ಇನಿಂಗ್ಸ್

9 ವಿಕೆಟ್​ಗೆ 285 ರನ್​ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ 10 ಎಸೆತಗಳಲ್ಲಿಯೇ ಮೊದಲ ಇನಿಂಗ್ಸ್ ಮುಗಿಸಿತು. ಜೇಮ್್ಸ ಆಂಡರ್​ಸನ್ ಗಳಿಸಿದ 2 ರನ್​ಗಳು ಇಂಗ್ಲೆಂಡ್​ನ ಮೊತ್ತಕ್ಕೆ ಸೇರಿದರೆ, ಮೊದಲ ದಿನ ಭಾರತಕ್ಕೆ ಅಡ್ಡಗೋಡೆಯಾಗಿ ನಿಂತಿದ್ದ ಸ್ಯಾಮ್ ಕರ›ನ್ (24) ಹಿಂದಿನ ದಿನದ ಮೊತ್ತಕ್ಕೆ ಮೊಹಮದ್ ಶಮಿಗೆ ವಿಕೆಟ್ ನೀಡಿದರು.

ಕೊಹ್ಲಿ ಶತಕ ಹೇಗಿತ್ತು?

65ನೇ ಓವರ್​ನ 5ನೇ ಎಸೆತವನ್ನು ಬೌಂಡರಿಗೆ ತಳ್ಳಿದ ಕೊಹ್ಲಿ 22ನೇ ಟೆಸ್ಟ್ ಶತಕವನ್ನು ಪೂರೈಸಿದರು. ಮೂರಂಕಿ ಗಡಿ ಮುಟ್ಟಿದ ಬೆನ್ನಲ್ಲಿಯೇ, ‘ಕಮ್ ಆನ್’ ಎಂದು ಕಿರುಚಾಡಿ ಹೆಲ್ಮೆಟ್ ತೆಗೆದು ಸಂಭ್ರಮ ಆಚರಿಸಿದ ವಿರಾಟ್, ಕುತ್ತಿಗೆಯಲ್ಲಿ ಧರಿಸಿದ್ದ ನಿಶ್ಚಿತಾರ್ಥದ ಉಂಗುರವನ್ನು ಪೆವಿಲಿಯನ್ ಕಡೆ ತೋರಿಸಿ ಸಂಭ್ರಮಿಸಿದರು. 2014ರ ಪ್ರವಾಸದ 5 ಟೆಸ್ಟ್​ಗಳಲ್ಲಿ ಕೇವಲ 134 ರನ್ ಬಾರಿಸಿದ್ದ ಕೊಹ್ಲಿ, ಇನಿಂಗ್ಸ್ ವೇಳೆ ಹಲವು ಜೀವದಾನ ಪಡೆದರು. ಇನ್​ಸೈಡ್ ಹಾಗೂ ಔಟ್​ಸೈಡ್ ಎಡ್ಜ್ ಆದ ಹಲವು ಕ್ಷಣಗಳಿದ್ದವು. ಆತಂಕದ ಕ್ಷಣಗಳನ್ನು ಎದುರಿಸಿ ಆಡಿದ ಅವರ ಶತಕ ‘ದಿ ಬೆಸ್ಟ್’ ಎನ್ನಲು ಅಸಾಧ್ಯವಾದರೂ, ಪರಿಸ್ಥಿತಿಯ ದೃಷ್ಟಿಯಿಂದ ನೋಡಿದಾಗಿ ಹಿಂದಿನೆಲ್ಲ ಶತಕಗಳಿಗಿಂತ ಬಹಳ ವಿಶೇಷವೆನಿಸಿದೆ.

ಅಜರ್ ಸರಿಗಟ್ಟಿದ ಕೊಹ್ಲಿ

ಇಂಗ್ಲೆಂಡ್​ನಲ್ಲಿ ನಾಯಕನಾಗಿ ಆಡಿದ ಮೊದಲ ಟೆಸ್ಟ್​ನಲ್ಲೇ ಶತಕ ಸಿಡಿಸಿದ್ದ ಮೊಹಮದ್ ಅಜರುದ್ದೀನ್ ಅವರ ಭಾರತೀಯ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ಅಜರ್ 1990ರಲ್ಲಿ 121 ರನ್ ಸಿಡಿಸಿದ್ದರು.

15 ನಾಯಕನಾಗಿ ಗರಿಷ್ಠ ಶತಕ ಬಾರಿಸಿದ ಪಟ್ಟಿಯಲ್ಲಿ ಕೊಹ್ಲಿ ಜಂಟಿ 3ನೇ ಸ್ಥಾನ ಸಂಪಾದಿಸಿದರು. ಅಲನ್ ಬಾರ್ಡರ್, ಸ್ಟೀವ್ ವಾ ಹಾಗೂ ಸ್ಟೀವನ್ ಸ್ಮಿತ್ ಕೂಡ ನಾಯಕರಾಗಿ ತಲಾ 15 ಶತಕ ಬಾರಿಸಿದ್ದಾರೆ. ಗ್ರೇಮ್ ಸ್ಮಿತ್ (25) ಅಗ್ರಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್ (19) ನಂತರದ ಸ್ಥಾನದಲ್ಲಿದ್ದಾರೆ.

51 ಇಂಗ್ಲೆಂಡ್​ನಲ್ಲಿ 51 ವರ್ಷಗಳ ಬಳಿಕ ವೇಗಿಯೊಂದಿಗೆ ಭಾರತದ ಸ್ಪಿನ್ನರ್ ಹೊಸ ಚೆಂಡಿನ ದಾಳಿ ಆರಂಭಿಸಿದರು. ಇಂಗ್ಲೆಂಡ್​ನ 2ನೇ ಇನಿಂಗ್ಸ್​ನಲ್ಲಿ ಶಮಿ ಹಾಗೂ ಅಶ್ವಿನ್ ಹೊಸ ಚೆಂಡಿನಲ್ಲಿ ದಾಳಿ ನಡೆಸಿದರು. ಇದಕ್ಕೂ ಮುನ್ನ 1967ರಲ್ಲಿ ಬಿಷನ್ ಸಿಂಗ್ ಬೇಡಿ ಈ ಸಾಧನೆ ಮಾಡಿದ್ದರು.

ಕೊಹ್ಲಿಯಿಂದ ಕ್ಲಾಸಿಕ್ ಶತಕ

ಯುವ ಕ್ರಿಕೆಟಿಗರಿಗೆ ಪಾಠವಾಗಬಲ್ಲ ರೀತಿಯ ಇನಿಂಗ್ಸ್ ಆಡಿದ ವಿರಾಟ್ ಕೊಹ್ಲಿ, ಎಂಟು ಬ್ಯಾಟ್ಸ್​ಮನ್​ಗಳ ಜತೆ ಪಾಲುದಾರಿಕೆ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. ಆತುರದ ಆಟವಾಡಿ ಕೆಎಲ್ ರಾಹುಲ್ ಬೌಲ್ಡ್ ಆದ ಬಳಿಕ ಕ್ರೀಸ್​ಗಿಳಿದ ಕೊಹ್ಲಿಗೆ ಅಜಿಂಕ್ಯ ರಹಾನೆ (15 ರನ್, 34 ಎಸೆತ, 1 ಬೌಂಡರಿ)ಹಾಗೂ ಹಾರ್ದಿಕ್ ಪಾಂಡ್ಯರಿಂದ (22 ರನ್, 52 ಎಸೆತ, 3 ಬೌಂಡರಿ) ಮಾತ್ರವೇ ಹೆಚ್ಚಿನ ಸಾಥ್ ಸಿಕ್ಕಿತು. 4ನೇ ವಿಕೆಟ್​ಗೆ ರಹಾನೆ ಜತೆ 41 ರನ್ ಜತೆಯಾಟವಾಡಿದ ಕೊಹ್ಲಿ, ಪಾಂಡ್ಯ ಜತೆ ಆತಂಕದ ಸಮಯದಲ್ಲಿ 6ನೇ ವಿಕೆಟ್​ಗೆ ಅಮೂಲ್ಯ 48 ರನ್ ಕೂಡಿಸಿದರು. ಇದು ಭಾರತದ ಚೇತರಿಕೆಗೆ ಕಾರಣವಾದವು. ಕೊಹ್ಲಿ ವಿಕೆಟ್​ಅನ್ನು ಉರುಳಿಸಲು ಇಂಗ್ಲೆಂಡ್ ಹಲವು ಪ್ರಯತ್ನ ಮಾಡಿದರೂ ಯಶ ಕಾಣಲಿಲ್ಲ. ಡೇವಿಡ್ ಮಲಾನ್ ಎರಡು ಬಾರಿ ಸ್ಲಿಪ್​ನಲ್ಲಿ ಕೊಹ್ಲಿಯ ಕ್ಯಾಚ್ ಕೈಚೆಲ್ಲಿದರೆ, ಸ್ಟೋಕ್ಸ್ ಒಮ್ಮೆ ರನೌಟ್ ಅವಕಾಶವನ್ನು ಹಾಳು ಮಾಡಿದರು. 7ನೇ ವಿಕೆಟ್​ಗೆ 21 ರನ್ ಜತೆಯಾಟವಾಡಿ ಅಶ್ವಿನ್ ಔಟಾದ ಬಳಿಕ ಹೆಚ್ಚಿನ ಸ್ಟ್ರೈಕ್ ತೆಗೆದುಕೊಂಡು ಜವಾಬ್ದಾರಿ ಮೆರೆದ ನಾಯಕ, ಇಂಗ್ಲೆಂಡ್​ನ ಘಾತಕ ದಾಳಿಯನ್ನು ಎದುರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದಲ್ಲದೆ, ಹಿನ್ನಡೆಯನ್ನು ಆದಷ್ಟು ಕಡಿಮೆ ಮಾಡಲು ನೆರವಾದರು.

ಭಾರತ ತಂಡ ಇಂಗ್ಲೆಂಡ್​ನಲ್ಲಿ 18 ಇನಿಂಗ್ಸ್​ಗಳ ಬಳಿಕ ಮೊದಲ ವಿಕೆಟ್​ಗೆ ಅರ್ಧಶತಕದ ಜತೆಯಾಟ ಪಡೆಯಿತು. 2011ರ ಜುಲೈನಲ್ಲಿ ಗೌತಮ್ ಗಂಭೀರ್ ಹಾಗೂ ಅಭಿನವ್ ಮಕುಂದ್ ಲಾರ್ಡ್ಸ್ ಟೆಸ್ಟ್​ನಲ್ಲಿ 63 ರನ್ ಬಾರಿಸಿದ ಬಳಿಕ ಮೊದಲ ವಿಕೆಟ್​ಗೆ ಎರಡು ಬಾರಿ 49 ರನ್ ದಾಖಲಿಸಿದ್ದೇ ಭಾರತದ ಗರಿಷ್ಠವಾಗಿತ್ತು.

ಒಂದು ಶತಕದಿಂದ ಎರಡು ದಾಖಲೆ ಬರೆದ ಕೊಹ್ಲಿ
ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಸಿಡಿಸಿದ ಅಮೋಘ ಶತಕ ಆಂಗ್ಲರ ನೆಲದಲ್ಲಿ ಕೊಹ್ಲಿಯ ಮೊದಲ ಶತಕ. ಇಂಗ್ಲೆಂಡ್ ನೆಲದಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದ ಕೊಹ್ಲಿ ವೃತ್ತಿ ಜೀವನದ 22ನೇ ಟೆಸ್ಟ್ ಶತಕ ಪೂರೈಸಿದರು. ಇದರ ಜೊತೆಗೆ ಅತಿ ವೇಗವಾಗಿ 7000 ರನ್ ಪೂರೈಸಿದ ನಾಯಕ ಎಂಬ ದಾಖಲೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ್ರು ವಿರಾಟ್. ಈ ಮುಂಚೆ ವೆಸ್ಟ್ ಇಂಡೀಸ್​ನ ಬ್ರಿಯನ್ ಲಾರಾ ಅತಿ ವೇಗದ ಶತಕ ದಾಖಲಿಸಿದ ನಾಯಕ ಎಂಬ ಗರಿಗೆ ಪಾತ್ರರಾಗಿದ್ದರು. ಈಗ ಲಾರಾರನ್ನು ಹಿಂದಿಕ್ಕಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ಆಗಿ 124 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ನಾಯಕನಾಗಿ ಅತಿ ವೇಗವಾಗಿ 4000, 5000 ಮತ್ತು 6000 ಗಳಿಸಿದ ಆಟಗಾರ ಎಂಬ ದಾಖಲೆಗಳನ್ನೂ ಮಾಡಿದ್ದರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..