ಎಬಿಡಿ ಕ್ಯಾಚ್​​ಗೆ ಆರ್​ಸಿಬಿ ಫ್ಯಾನ್ಸ್​ ಫುಲ್ ಫಿದಾ​..! ಕೊಹ್ಲಿ ಏನಂದ್ರು ಗೊತ್ತಾ..? #ABD_CatchVideo

ಭಾರತದ ಎಷ್ಟೋ ಕ್ರಿಕೆಟ್​ ಅಭಿಮಾನಿಗಳಿಗೆ ಆರ್​​ಸಿಬಿ ಬ್ಯಾಟ್ಸ್​​ಮನ್​ ಎಬಿ ಡಿವಿಲಿಯರ್ಸ್​ ಅಂದ್ರೆ ಅಚ್ಚು ಮೆಚ್ಚು. ಎಬಿಡಿಯ ವಿಭಿನ್ನ ಬ್ಯಾಟಿಂಗ್​ ಶೈಲಿ ಎಲ್ಲರನ್ನ ಬೆರಗುಗೊಳಿಸುತ್ತದೆ. ಅಭಿಮಾನಿಗಳಿಗಷ್ಟೇ ಏಕೆ..? ಸ್ವತಃ ಆರ್​ಸಿಬಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೂ ಕೂಡ ಎಬಿಡಿ ಸಾಕಷ್ಟು ಬಾರಿ ಬೆರಗುಗೊಳಿಸಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಅವರು ಬ್ಯಾಟ್​ ಮೂಲಕ ಅಲ್ಲ. ಅದ್ಭುತ ಕ್ಯಾಚ್​ ಮೂಲಕ ವಿರಾಟ್​​ ಹೃದಯ ಕದ್ದಿದ್ದಾರೆ.

ಆರ್​ಸಿಬಿ ನೀಡಿದ್ದ 219 ರನ್​ಗಳ ಬೃಹತ್​ ಟಾರ್ಗೆಟ್​​ ಬೆನ್ನಟ್ಟಿದ ಎಸ್​ಆರ್​ಹೆಚ್​​ ತಂಡದ ಓಪನರ್​ ಅಲೆಕ್ಸ್​ ಹೇಲ್ಸ್ ಆರಂಭದಿಂದಲೇ ಅಬ್ಬರಿಸೋಕೆ ಆರಂಭಿಸಿದರು. ಈ ವೇಳೆ ಹೇಲ್ಸ್ ಎರಡು ಬಾರಿ ಜೀವದಾನ ಪಡೆದರು. ಒಂದು ಕ್ಯಾಚ್​​ನ್ನ ಟಿಮ್​ ಸೌಥಿ ಡ್ರಾಪ್​ ಮಾಡಿದರೆ, ಇನ್ನೊಂದನ್ನ ಕ್ಯಾಪ್ಟನ್​ ಕೊಹ್ಲಿ ಕೈಚೆಲ್ಲಿದರು. ಇವುಗಳಿಂದ ತೀವ್ರ ಬೇಸರಗೊಂಡಿದ್ದ ಕೊಹ್ಲಿಗೆ, ಎಬಿ ಡಿವಿಲಿಯರ್ಸ್​ ಪಡೆದ ಅದ್ಭುತ ಕ್ಯಾಚ್​ ಸಿಕ್ಕಾಪಟ್ಟೆ ಖುಷಿ ತಂದಿತು.

24 ಎಸೆತಗಳಲ್ಲಿ 37 ರನ್​ ಗಳಿಸಿದ್ದ ಅಲೆಕ್ಸ್​ ಹೇಲ್ಸ್, ಮೊಯಿನ್​​ ಅಲಿ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಯತ್ನಿಸಿದರು. ಆದರೆ, ಬೌಂಡರಿ  ಗೆರೆ ಬಳಿಯೇ ನಿಂತಿದ್ದ ಎಬಿ ಡಿವಿಲಿಯರ್ಸ್​ ಒನ್  ಹ್ಯಾಂಡ್ ಕ್ಯಾಚ್​ ಪಡೆದರು. ಈ ಕ್ಯಾಚ್​ನ್ನ ಸ್ವತಃ ಎಬಿಡಿ ಸಂಭ್ರಮಿಸಿದ್ದಲ್ಲದೆ, ಕೊಹ್ಲಿ ಹಾಗೂ ಸಹ ಆಟಗಾರರು ಕೂಡ ಖುಷಿ ಪಟ್ಟರು.

ಕೊಹ್ಲಿ ಏನಂದ್ರು..?

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್, ಆರ್ ಸಿಬಿ ನಡುವಿನ ಪಂದ್ಯದಲ್ಲಿ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹಾರಿ ಕ್ಯಾಚ್ ಹಿಡಿದಿದ್ದನ್ನು ನೋಡಿ ಕೊಹ್ಲಿ ಎಬಿಡಿಯನ್ನು ಸೂಪರ್ ಮ್ಯಾನ್‍ಗೆ ಹೋಲಿಕೆ ಮಾಡಿದ್ದಾರೆ.

ಈ ಕುರಿತು ಪಂದ್ಯದ ಮುಕ್ತಾಯ ಬಳಿಕ ಎಬಿ ಡಿವಿಲಿಯರ್ಸ್ ಫೋಟೋ ಟ್ವೀಟ್ ಮಾಡಿರುವ ಕೊಹ್ಲಿ ಸೂಪರ್ ಮ್ಯಾನ್ ಲೈವ್ ಟು ಡೇ ಎಂದು ಬರೆದುಕೊಂಡಿದ್ದಾರೆ.

ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ಎಬಿಡಿ ಅರ್ಧ ಶತಕ (69 ರನ್, 39 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದ್ದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 218 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು, ಆದರೆ ಫೀಲ್ಡಿಂಗ್ ನಲ್ಲಿ ಹಲವು ಬಾರಿ ಎಡವಿತ್ತು. ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈ ಚೆಲ್ಲಿದರೆ, ಹಲವು ಆಟಗಾರರು ಕಳಪೆ ಫೀಲ್ಡಿಂಗ್ ನಡೆಸಿದರು. ಇದರ ನಡುವೆಯೂ ಎಬಿಡಿ ಪಡೆದ ಕ್ಯಾಚ್ ಕ್ರಿಕೆಟ್ ಆರ್ ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಪಂದ್ಯದ ಬಳಿಕ ಮಾತನಾಡಿದ ಎಬಿಡಿ ಆ ವೇಳೆ ಚೆಂಡು ತನ್ನ ಬಳಿಯಿಂದ ದೂರ ಬರುವುದನ್ನು ಕಂಡು ಕ್ಯಾಚ್ ಪಡೆಯಲು ಯತ್ನಿಸಿದೆ. ಅದೃಷ್ಟವಶಾತ್ ಚೆಂಡು ನನ್ನ ಕೈ ಸೇರಿತ್ತು. ಪ್ರತಿ ಬಾರಿ ನಾನು ನನ್ನನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲು ಆರ್ ಸಿಬಿ ಗೆ ಹೈದರಾಬಾದ್ ವಿರುದ್ಧ ಗೆಲುವು ಪಡೆಯುವುದು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ 14 ರನ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಶನಿವಾರ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್ ಸಿಬಿ ಎದುರಿಸಲಿದ್ದು, ಗೆಲ್ಲುವ ಒತ್ತಡದಲ್ಲಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍