ಕೊಹ್ಲಿ – ಎಬಿ ಡಿವಿಲಿಯರ್ಸ್ ಅಮೋಘ ಆಟಕ್ಕೆ ಶರಣಾದ ಡೇರ್ ಡೆವಿಲ್ಸ್..! ಕೊನೆಗೂ ಗೆಲುವಿನ ಟ್ರ್ಯಾಕ್ ಗೆ ಮರಳಿದ ಆರ್ ಸಿ ಬಿ..!!

ಕ್ಯಾಪ್ಟನ್​ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ ಅವರ ಅಮೋಘ ಜತೆಯಾಟದಿಂದಾಗಿ ಆರ್​ಸಿಬಿ ಸುಲಭವಾಗಿ ಜಯ ಪಡೆದಿದೆ. ಡೆಲ್ಲಿ ಡೇರ್​ಡೆವಿಲ್ಸ್ ನೀಡಿದ್ದ 182 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನ ಚೇಸ್​ ಮಾಡಿದ ಆರ್​ಸಿಬಿ ಗೆಲುವಿನ ನಗೆ ಬೀರಿದೆ.

ಡೆಲ್ಲಿಗೆ ಆರಂಭದಲ್ಲೇ ಶಾಕ್​ ನೀಡಿದ ಚಹಲ್​
ಟಾಸ್​ ಗೆದ್ದ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟೂರ್ನಿಯುದ್ದಕ್ಕೂ ಅಬ್ಬರಿಸುತ್ತ ಬಂದಿರೋ ಡೆಲ್ಲಿ ಓಪನರ್​ ಪೃಥ್ವಿ ಶಾ ಮೊದಲ ಓವರ್​ನಲ್ಲೇ ಚಹಲ್​ ಗೂಗ್ಲಿಗೆ ಬಲಿಯಾದರು. ಇನ್ನೋರ್ವ ಓಪನರ್ ಜೇಸನ್​ ರಾಯ್​ ಕೂಡ ಪೃಥ್ವಿ ರೀತಿಯಲ್ಲೇ ಕ್ಲೀನ್​ ಬೌಲ್ಡ್​ ಆದರು.

ಪಂತ್​ ಆರ್ಭಟ, ಅಯ್ಯರ್ ಆಸರೆ
ಎರಡು ವಿಕೆಟ್​​ ಪತನದಿಂದ ಇಕ್ಕಟ್ಟಿನಲ್ಲಿ ಸಿಲುಕಿದ್ದ ತಂಡಕ್ಕೆ ನಾಯಕ ಶ್ರೇಯಸ್​ ಅಯ್ಯರ್​ ಹಾಗೂ ರಿಷಬ್ ಪಂತ್​ ಆಸರೆಯಾದರು.

ಸ್ಪೋಟಕ ಬ್ಯಾಟಿಂಗ್​ ನಡೆಸಿದ ರಿಷಬ್ ಪಂತ್​ ಆರ್​ಸಿಬಿ ಬೌಲರ್​ಗಳ ಬೆವರಿಳಿಸಿದರು. 34 ಎಸೆತಗಳನ್ನ ಎದುರಿಸಿದ ಪಂತ್​, 4 ಸಿಕ್ಸರ್​ ಹಾಗೂ 5 ಬೌಂಡರಿಗಳ ಮೂಲಕ 61 ರನ್​ ಬಾರಿಸಿದರು. 32 ರನ್​​ ಗಳಿಸಿದ ಶ್ರೇಯಸ್​ ಅಯ್ಯರ್​, 15ನೇ ಓವರ್​ನಲ್ಲಿ ಮೊಯಿನ್​ ಅಲಿ ಎಸೆತದಲ್ಲಿ ಔಟಾದರು.

ಮಿಂಚಿದ ಅಂಡರ್​ 19 ಸ್ಟಾರ್​ ಅಭಿಷೇಕ ಶರ್ಮಾ
ಇನ್ನು, ಇದೇ ಚೊಚ್ಚಲ ಪಂದ್ಯವನ್ನಾಡ್ತಿರೋ ಅಂಡರ್​ 19 ಪ್ಲೇಯರ್​ ಅಭಿಷೇಕ ಶರ್ಮಾ ಕೇವಲ 19 ಎಸೆತಗಳಲ್ಲಿ 46 ರನ್​ ಗಳಿಸಿದರು. ಇದರಲ್ಲಿ 4 ಭರ್ಜರಿ ಸಿಕ್ಸರ್​ಗಳು ಸೇರಿವೆ. ಒಟ್ಟು 20 ಓವರ್​ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಡಿಡಿ, 181 ರನ್​​ ಗಳಿಸಿದರು.

182 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್​ಸಿಬಿ
182 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿಗೆ ಓಪನಿಂಗ್​ ಜೋಡಿ ಕೈಕೊಟ್ಟರು. ಮೊಯಿನ್​ ಅಲಿ ಕೇವಲ 1 ಹಾಗೂ ಪಾರ್ಥೀವ್​ ಪಟೇಲ್​ 6 ರನ್​​ಗೆ ಔಟಾದರು.

ಈ ವೇಳೆ ಜತೆಯಾದ ಕ್ಯಾಪ್ಟನ್​ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ ಡೆಲ್ಲಿ ತಂಡದ ಬೌಲರ್​ಗಳನ್ನ ಸತಾಯಿಸಿದರು. ವೇಗದ ಬ್ಯಾಟಿಂಗ್​​ಗಿಳಿದ ವಿರಾಟ್​, 40 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 7 ಬೌಂಡರಿಗಳ ನೆರವಿನೊಂದಿಗೆ 70 ರನ್​ ಗಳಿಸಿದರು. ಅಮಿತ್ ಮಿಶ್ರಾ ಎಸೆತದಲ್ಲಿ ಕೀಪರ್ ಪಂತ್​ಗೆ ಕ್ಯಾಚ್​ ನೀಡಿದರು.

ಆದರೆ, ಗೆಲುವಿನ ಆಟವಾಡಿದ ಎಬಿ ಡಿವಿಲಿಯರ್ಸ್ ಆರ್​ಸಿಬಿ ಜಯ ಪಡೆಯುವವರೆಗೂ ಬ್ಯಾಟ್​ ಬೀಸಿದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍