ಲಾಸ್ಟ್ ಬಾಲ್ ಥ್ರಿಲ್ಲರ್ ನಲ್ಲಿ ಹೈದರಾಬಾದ್ ಗೆ ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು..!

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 1 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.

ಸನ್ ರೈಸರ್ಸ್ ಪರ ಉತ್ತಮ ಆರಂಭ ನೀಡಿದ ಧವನ್ ಹಾಗೂ ಸಹಾ ಬ್ಯಾಟಿಂಗ್ ನೆರವಿನೊಡನೆ ಉತ್ತಮ ಆರಂಭ ಪಡೆಯಿತು. ಬಿರುಸಿನ ಪ್ರದರ್ಶನ ನೀಡಿದ ಧವನ್ ಕೇವಲ 28 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 45 ರನ್ ಸಿಡಿಸಿ ಮಾರ್ಕಂಡೆ ಬೌಲಿಂಗ್ ನಲ್ಲಿ ಔಟಾದರು. ಇತ್ತ 20 ಎಸೆತಗಳಲ್ಲಿ 22 ರನ್ ಗಳಿಸಿದ್ದ ಸಹಾ ರನ್ನು ಸಹ ಮಾರ್ಕಂಡೆ ಎಲ್‍ಬಿ ಗೆ ಕೆಡವಿದರು. ಬಳಿಕ ಬಂದ ನಾಯಕ ವಿಲಿಯಂಸನ್ 6 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಈ ವೇಳೆ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಮನಿಷ್ ಪಾಂಡೆ (11 ರನ್), ಶಕೀಬ್ ಅಲ್ ಹಸನ್ (12) ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಮಾರ್ಕಂಡೆ ಹೈದರಾಬಾದ್ ತಂಡಕ್ಕೆ ಹೊಡೆತ ನೀಡಿದರು. ಇನ್ನು ಸ್ಫೋಟಕ ಆಟಗಾರ ಯೂಸಫ್ ಪಠಾಣ್ (14) ಹಾಗೂ ರಶೀದ್ ಖಾನ್ (0)ರನ್ನು ಬುಮ್ರಾ ಬಲಿ ಪಡೆದು ಗೆಲುವಿನ ಆಸೆ ಚಿಗುರುವಂತೆ ಮಾಡಿದರು.

ಕೊನೆಯ 12 ಎಸೆತಗಳಲ್ಲಿ 12 ರನ್ ಗಳಿಸಬೇಕಿದ್ದ ವೇಳೆ ರಹಮಾನ್ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದರು. 19 ನೇ ಓವರ್ ನಲ್ಲಿ ಕೇವಲ 1 ರನ್ ನೀಡಿದ ರಹಮಾನ್ ಕೌಲ್ ಹಾಗೂ ಸಂದೀಪ್ ಶರ್ಮಾ ವಿಕೆಟ್ ಪಡೆದರು. ಕೊನೆಯ ಓವರ್ ನಲ್ಲಿ 11 ರನ್ ಗಳಿಸ ಬೇಕಾದ ಒತ್ತಡಕ್ಕೆ ಸಿಲುಕಿದ ಹೂಡಾ (25 ಎಸೆತ, 32 ರನ್ ತಲಾ 1 ಸಿಕ್ಸರ್, ಬೌಂಡರಿ) ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡದ ಗೆಲುವಿಗೆ ರೋಚಕ ತಿರುವು ನೀಡಿದರು. ಮುಂಬೈ ಪರ ಸಂದೀಪ್ ಶರ್ಮಾ, ಸ್ಟಾನ್‍ಲಾಕ್, ಕೌರ್ ತಲಾ 2 ವಿಕೆಟ್ ಮತ್ತು ಹಸನ್ ರಷೀದ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ನಿರಾಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮುಂಬೈ ಪರ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (10 ಎಸೆತ 11ರನ್) ಮೊದಲ ಓವರ್ ನಲ್ಲೇ ಜೀವದಾನ ಪಡೆದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಮತ್ತೊಂದೆಡೆ ಆಕ್ರಮಣಕಾರಿ ಆಟ ಪ್ರಾರಂಭಿಸಿದ್ದ ಎವಿನ್ ಲೂವಿಸ್ (54 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಸುಲಭ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಇಶಾನ್ ಕಿಶಾನ್ (9) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಕೃನಾಲ್ ಪಾಂಡ್ಯ (10 ರನ್) ಈ ಬಾರಿ ಉತ್ತಮ ಬ್ಯಾಟಿಂಗ್ ನಡೆಸಲಿಲ್ಲ.

ನಿರಂತರವಾಗಿ ವಿಕೆಟ್ ಕಳೆದಕೊಳ್ಳುತ್ತ ಸಾಗಿದ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಪೊಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ನಿಧಾನಗತಿ ಬ್ಯಾಟ್ ನಡೆಸಿದರು. ಈ ವೇಳೆ ಪೊಲಾರ್ಡ್ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‍ಗಳಿಂದ 28 ರನ್ ಗಳಿಸಿ ಔಟಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸೂರ್ಯಕುಮಾರ್ 28 ರನ್ ಗಳಿಸಿ ಔಟದರು. ಬಳಿಕ ಬಂದ ಮುಂಬೈ ಬೌಲರ್ ಗಳಾದ ಬೆನ್ ಕಟ್ಟಿಂಗ್ (9), ಪ್ರದೀಪ್ ಸಾಂಗ್ವಾನ್ (2), ಮಾಯಂಕ್ ಮಾರ್ಕಂಡೆ (6) ಹಾಗೂ ಜಸ್ಪ್ರೀತ್ ಬುಮ್ರಾ (4) ರನ್ ಗಳಿಸಿದರು. ಇದರೊಂದಿಗೆ ಮುಂಬೈ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಸನ್ ರೈಸರ್ಸ್ ಪರ ಸಂದೀಪ್ ಶರ್ಮಾ, ಸಿದ್ದಾರ್ಥ್ ಕೌಲ್, ಬಿಲ್ಲಿ ಸ್ಟಾನ್‍ಲೇಕ್ ತಲಾ ಎರಡು ವಿಕೆಟ್ ಮತ್ತು ರಶೀದ್ ಖಾನ್ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍