ಅಪ್ಪ ಮಿಲಿಟರಿಯಲ್ಲಿ.. ಅಮ್ಮ ಟ್ರಾಫಿಕ್​ ಡ್ಯೂಟಿಯಲಿ.. ಆದ್ರೆ ಮಗು ಎಲ್ಲಿ ಗೊತ್ತಾ..? ಪೊಲೀಸ್ ವ್ಯವಸ್ಥೆಗೆ ಹಿಡಿ ಶಾಪ ಹಾಕಿದ ನೆಟ್ಟಿಗರು..!

ಮಂಗಳೂರು: ಟ್ರಾಫಿಕ್ ಪೊಲೀಸರು ಎಂದ ಮೇಲೆ ಗಾಳಿ, ಮಳೆ, ಬಿಸಿಲು ಲೆಕ್ಕಿಸದೇ ಕೆಲಸ ಮಾಡಬೇಕಾಗುತ್ತೆ. ಇದರಲ್ಲಿ ಮಹಿಳೆಯರು, ಪುರುಷರು ಎಂಬ ತಾರತಮ್ಯ ಏನಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರಿದ್ದಾರೆ. ಅವರ ಪುಟ್ಟ ಮಗಳೂ ಟ್ರಾಫಿಕ್ ಗೂಡಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್ ಆಗಿದೆ.

ವಿಡಿಯೋದಲ್ಲಿ .. ಸುಳ್ಯ ಪೊಲೀಸ್ ಠಾಣೆಯ ಮಹಿಳಾ ಪೇದೆ ಯೋಗಿತಾ ಎಂಬುವವರು ಮಳೆಯಲ್ಲಿಯೇ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ರೆ, ಮಗಳು ಚಳಿಯಲ್ಲಿ ಟ್ರಾಫಿಕ್ ಗೂಡಿನಲ್ಲಿರುವುದು ಕಂಡುಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಹಾಗೂ ಮಗುವಿನ ಸ್ಥಿತಿಯ ಬಗ್ಗೆ ಹಾಗೂ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ.

ಯೋಗಿತಾ ಪತಿ ಮಿಲಿಟರಿಯಲ್ಲಿ ಸೇವೆ
ಇನ್ನು ಮಹಿಳಾ ಪೇದೆ ಯೋಗಿತಾ ಅವರ ಪತಿ ಕಿಶೋರ್ ಮಾವಾಜೆ ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ವಿಭಾಗದಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಯೋಗಿತಾ ಅವರ ಗಂಡನ ಮನೆ ಹಾಗೂ ತವರು ಮನೆ ಸುಳ್ಯ ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಈ ಕಾರಣಕ್ಕಾಗಿ ಶಾಲೆಯ ಅವಧಿ ಮುಗಿದ ಬಳಿಕ ಮಗಳು ಆರಾಧ್ಯ ತಾಯಿ ಜೊತೆಗೇ ಇರುತ್ತಿದ್ದಳು. 10 ದಿನಗಳ ಹಿಂದೆ ಯೋಗಿತಾ ಅವರನ್ನು ಟ್ರಾಫಿಕ್ ಡ್ಯೂಟಿಗೆ ಹಾಕಲಾಗಿತ್ತು‌. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿ ಜಾಲತಾಣದಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಯೋಗಿತಾರನ್ನು ಮತ್ತೆ ಠಾಣೆಯ ಕೆಲಸಕ್ಕೆ ನಿಯೋಜಿಸಲಾಗಿದೆ.

ಎಎಸ್​ಐ ವಿರುದ್ಧ ತಿರುಗಿ ಬಿದ್ದಿದಕ್ಕೆ ಟ್ರಾಫಿಕ್ ಡ್ಯೂಟಿನಾ !?
ಯೋಗಿತಾ ಇದೀಗ ವಾಸಿಸುತ್ತಿರುವ ಪೊಲೀಸ್ ವಸತಿಗೃಹದ ಪಕ್ಕದಲ್ಲಿದ್ದ ಪೊಲೀಸ್ ಎಎಸ್​ಐ ಆಕೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ನಡುವೆ ಪೇದೆಯ ವಿರುದ್ಧ ಯೋಗಿತಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರನ್ನೂ ನೀಡಿದ್ದರು‌. ಸುಳ್ಯ ಠಾಣೆಯ ಅಧಿಕಾರಿಗಳು ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾರಣಕ್ಕಾಗಿ ಯೋಗಿತಾ ಒಂದು ತಿಂಗಳ ಮೆಡಿಕಲ್ ಲೀವ್ ಹಾಕಿ ಮನೆಯಲ್ಲೇ ಇದ್ದರು.

ಈ ನಡುವೆ ಆಕೆಯ ಪತಿ, ಯೋಧ ಗಣೇಶ್ ಮಾವಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದ ಬಳಿಕ ಆರೋಪಿ ಎಎಸ್​ಐ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ನಡುವೆ ರಜೆ ಮುಗಿಸಿ ಜೂನ್ 17 ಕ್ಕೆ ಮತ್ತೆ ಕರ್ತವ್ಯಕ್ಕೆ ಹಾಜರಾದ ಯೋಗಿತಾರನ್ನು ಸುಳ್ಯ ನಗರ ಠಾಣೆಯ ಅಧಿಕಾರಿ ಟ್ರಾಫಿಕ್ ಡ್ಯೂಟಿಗೆ ಹಾಕಿದ್ದರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..